ಪಾಲಕರು ಮಾನವೀಯ ಗುಣ ಬೆಳೆಸಲಿ

26 AKR 01
Published on

ಅಕ್ಕಿಆಲೂರ: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪದವಿ ಜತೆಗೆ ಮಾನವೀಯ ಗುಣಗಳನ್ನು ಅಳವಡಿಸುವತ್ತ ಪಾಲಕರು, ಶಿಕ್ಷಕರು ಗಮನ ಹರಿಸಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ಸಮೀಪದ ಶಂಕ್ರಿಕೊಪ್ಪ ಗ್ರಾಮದಲ್ಲಿ ಸ್ನೇಕ್ ಕೃಷ್ಣ ರೆಡ್ಡಿ ಸ್ನೇಹ ಬಳಗದಿಂದ ಆಯೋಜಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಹಾಗೂ ಹಾವೇರಿ ಜಿಲ್ಲೆಗೆ 3ನೇ ಸ್ಥಾನ ಪಡೆದ ಇಂಪನಾ ಶಂಕ್ರಿಕೊಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.

ಶಿಕ್ಷಣದ ಕ್ರಾಂತಿ ಹೆಚ್ಚಾಗಿ, ಉನ್ನತ ಮಟ್ಟದಲ್ಲಿ ಅಂಕಗಳಿಸುವ ಸನ್ನಿವೇಶ ಹೆಚ್ಚಾಗುತ್ತಿದೆ. ವರ್ಷದಿಂದ ವಷರ್ಕ್ಕೆ ಪದವಿ ಪಡೆಯುವವರ ಸಂಖ್ಯೆ ಅಧಿಕವಾಗಿದೆ. ಆದರೆ ದಯೆ, ಧರ್ಮ, ಮಾನವೀಯತೆ ಮತ್ತು ನೈತಿಕ ಮನಸುಗಳ ಸಂಖ್ಯೆ ಕ್ಷಿಣಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಜನಾಂಗದಲ್ಲಿ ಆಗಾಧ ಸಾಮರ್ಥ್ಯವಿದ್ದು, ಅವುಗಳ ಉಪಯೋಗ ಸಮಾಜ ಮತ್ತು ದೇಶಕ್ಕೆ ಸಲ್ಲಬೇಕು. ಕಠಿಣ ಪರಿಶ್ರಮವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದಕ್ಕೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೂಕ್ತ ನಿದರ್ಶನ ಎಂದು ಹೇಳಿದರು.

ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಬಡತನದಲ್ಲಿ ಕಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಬೌದ್ಧಿಕ ದಾರಿದ್ರ್ಯ ನಮ್ಮತ್ತ ಸುಳಿಯದಂತೆ ಅಧ್ಯಯನಶೀಲರಾಗಬೇಕು. ರಾಷ್ಟ್ರೀಯತೆ ಶಿಕ್ಷಣದ ಮೊದಲ ಆದ್ಯತೆಯಾಗಬೇಕು. ಹಳ್ಳಿಗಳಲ್ಲಿನ ಜನರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ಸಂಜನಾ ಲಿಂಗರೆಡ್ಡಿ, ಸಂಜನಾ ಡೊಂಡಿಗನಣ್ಣನವರ ಅವರನ್ನು ಗೌರವಿಸಲಾಯಿತು.

ಮಹಾಂತೇಶ ಶಂಕ್ರಿಕೊಪ್ಪ, ಸ್ನೇಕ್ ಕೃಷ್ಣ ರೆಡ್ಡಿ, ರಫೀಕ್ ಮುಲ್ಲಾ, ಸಾವಕ್ಕ ಕಾಳೇರ, ಮೈಲಾರಿ ಹುಲಗೂರ, ಸಿದ್ದು ಕುಂಚಿಗೇರಿ, ರಾಘವೇಂದ್ರ ಕಲಾಲ್, ರಾಕೇಶ ಬಿದರಗಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net