

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಾಲಕರು ಕೂಡಾ ಶಾಲೆ ಮೇಲೆ ಅಭಿಮಾನವಿಟ್ಟು ಕನ್ನಡ ಮಾಧ್ಯಮ ಬಗ್ಗೆ ಹಿಂಜರಿಕೆಯಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಭಿನ್ನಾಭಿಪ್ರಾಯ ಬಿಟ್ಟು ಉತ್ತಮ ಶಿಕ್ಷಣ ನೀಡುವಲ್ಲಿ ಗಮನಹರಿಸಬೇಕು ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಕಿವಿಮಾತು ಹೇಳಿದರು.
ಪಡುಬಿದ್ರಿ ಶ್ರೀ ಬ್ರಹ್ಮವಿದ್ಯಾಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿ ಗಣಪತಿ ಪ್ರೌಢಶಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಭೂಮಿಕಾ ರಾವ್, ಹಿತೇಶ್ ಆಚಾರ್ಯ, ಪ್ರತೀಕ್ಷಾ ಶೆಟ್ಟಿ ಅವರನ್ನು ಅಭಿನಂದಿಸಿ, ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪಾಷಾ ಅವರಿಗೆ ಅರೋಗ್ಯ ನಿಧಿ ವಿತರಿಸಲಾಯಿತು. ದಾನಿ ಹಾಗೂ ಹಳೇ ವಿದ್ಯಾರ್ಥಿ ಪೃಥ್ವಿರಾಜ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಹಳೇ ವಿದ್ಯಾರ್ಥಿ ಲಲಿತಾ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಮಾರ್ಗದರ್ಶಕ ಅನಂತಪಟ್ಟಾಭಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಪ್ರೌಢಶಾಲೆ ಮುಖ್ಯಶಿಕ್ಷಕಿ ಅನುರಾಧಾ ಪಿ.ಎಸ್. ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಘವೇಂದ್ರ ರಾವ್ ನಿರೂಪಿಸಿದರು. ಶ್ರೀ ಬ್ರಹ್ಮವಿದ್ಯಾಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಅಶೋಕ್ ವಂದಿಸಿದರು.