

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಪ್ರಮುಖ. ಮನೆಯೇ ಮೊದಲ ಪಾಠಶಾಲೆ ಎಂದು ಬಾಯಿಮಾತಿನಿಂದ ಹೇಳದೆ ಪಾಲಕರು ಮನೆಯಲ್ಲಿ ಮಕ್ಕಳಿಗಾಗಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದು ಧಾರವಾಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ಅಧ್ಯಾಪಕ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಹೇಳಿದರು.
ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಸಹಯೋಗದೊಂದಿಗೆ ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ- ತಾಯಿ ಮಕ್ಕಳ ಮುಂದೆ ಧನಾತ್ಮಕ ವಿಚಾರಗಳನ್ನು ಮಾತ್ರ ಮಾತನಾಡಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಸಂಸ್ಕಾರ ಕೇಂದ್ರ ಕುಟುಂಬ. ಮಕ್ಕಳ ಜೆತೆ ಹೆಚ್ಚು ಸಮಯ ಕಳೆದು ಅವರನ್ನು ಸ್ನೇಹಿತರಂತೆ ಕಾಣಬೇಕು. ಮಕ್ಕಳಿಗೆ ಮೊಬೈಲ್ ನೀಡಬಾರದು. ಮುಖ್ಯವಾಗಿ ಮಕ್ಕಳ ಮುಂದೆ ಹೆಚ್ಚು ಹೊತ್ತು ಮೊಬೈಲ್ ಬಳಸಬಾರದು. ಮನೆಯಲ್ಲಿ ದೈಹಿಕವಾಗಿ ಶ್ರಮವಾಗುವಂತಹ ಕೆಲಸಗಳನ್ನು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವೀರ ಉಪಾಧ್ಯೆ ಮಾತನಾಡಿ, ಅಂಕಗಳೇ ಅಂತಿಮ ಅಲ್ಲ. ಸಾಧನೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಜೆಎಸ್‌ಎಸ್ ಸಂಸ್ಥೆ ನೈತಿಕ ತಳಹದಿಯ ಮೇಲೆ ಶಿಕ್ಷಣ ನೀಡುತ್ತಿದೆ ಎಂದರು.
ಪ್ರಾಚಾರ್ಯೆ ರೇಣು ಪಾಟೀಲ ಮಾತನಾಡಿ, ಪಾಲಕರ ಸಹಕಾರ, ಸಹಾಯ ಶಿಕ್ಷಣ ಸಂಸ್ಥೆಗಳಿಗೆ ಅವಶ್ಯಕ. ಶಿಕ್ಷಕರು ನೀಡುವ ಸಲಹೆಗಳನ್ನು ಪಾಲಕರು ಪಾಲಿಸಿದರೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ನಾಗರಿಕರನ್ನಾಗಿ ಮಾಡಬಹುದು ಎಂದರು.
ಶಿಕ್ಷಕರು, 8ರಿಂದ 10ನೇ ತರಗತಿಯ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ನಂದಾ ಕುಕನೂರ ವಂದಿಸಿದರು.