

ಚಿಕ್ಕಬಳ್ಳಾಪುರ: 18 ವರ್ಷದೊಳಗಿನವರು ವಾಹನ ಚಾಲನೆ ಮಾಡಿದ್ದು ಕಂಡು ಬಂದಲ್ಲಿ ಅವರ ಪಾಲಕರ ವಿರುದ್ಧವೂ ಸಹ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. 18 ವರ್ಷದೊಳÀಗಿನವರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಾಲನೆ ಮಾಡಬಾರದು. ಒಂದು ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಅವರ ಪಾಲಕರನ್ನು ಹೊಣೆಗಾರರಾಗಿಸಬೇಕು. ಅಪ್ರಾಪ್ತರು ಅಪಘಾತ ಮಾಡಿದಲ್ಲಿ ಶಾಶ್ವತವಾಗಿ ವಾಹನ ಚಾಲನೆಯ ಪರವಾನಗಿಯನ್ನು ನೀಡದಂತೆ ಕ್ರಮ ಜರುಗಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕೆ.ಮಾಧವಿ ಮತ್ತಿತರರು ಇದ್ದರು.
*161 ಸಾವು ಪ್ರಕರಣಗಳು
ಕಳೆದ 2024 ರ ಜೂನ್ನಿಂದ ಇಲ್ಲಿಯವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಹನ ಅಪಘಾತಗಳಿಂದ 430 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 161 ಜನ ಮೃತಪಟ್ಟಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ನಗರ, ಪೆರೇಸಂದ್ರ ಮತ್ತು ಚಿಂತಾಮಣಿ ನಗರ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸಿವೆ. ಅದರಲ್ಲೂ ಕಳೆದ 7 ತಿಂಗಳಲ್ಲಿ ಸಂಜೆ 6 ರಿಂದ 9 ರ ಸಮಯದಲ್ಲಿ 118 ಪ್ರಕರಣಗಳು ವರದಿಯಾಗಿವೆ.
*28 ಬ್ಲಾಕ್ ಸ್ಪಾಟ್ ಗಳು
ಜಿಲ್ಲೆಯ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ 17 ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 11 ಸೇರಿದಂತೆ 28 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಇಲ್ಲಿ ಅಪಘಾತಗಳು ಹೆಚ್ಚಿಗೆ ಸಂಭವಿಸುತ್ತಿದ್ದು ಇವುಗಳಿಗೆ ಕಡಿವಾಣ ಹಾಕಲು ಸುರಕ್ಷತಾ ಕ್ರಮ ಕೈಗೊಳ್ಳಲು ಸಂಬ0ಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ.