ಶಾಲೆ ಮರು ಆರಂಭಿಸಲು ಒತ್ತಾಯಿಸಿ ಪಾಲಕರಿಂದ ಪ್ರತಿಭಟನೆ

SRP_09-01jpj
ಪಾಂಡವಪುರ-ಶ್ರೀರಂಗಪಟ್ಟಣ ರಸ್ತೆ ಬದಿಯಲ್ಲಿರುವ ಕೇಂಬ್ರಿಡ್ಜ್ ಶಾಲೆಯ ಮುಂಭಾಗ ಸೋಮವಾರ ವಿದ್ಯಾರ್ಥಿಗಳ ಪಾಲಕರು ಮರವೇ ಸಂಘಟನೆ ನೇತೃತ್ವದಲ್ಲಿ ಶಾಲಾ ಆಡಳಿತ ಹಾಗೂ ಬಿಇಒ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳ ಪಾಲಕರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಮಂಡ್ಯ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶಾಲಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಹಳೇ ಕಿರಂಗೂರು ಗ್ರಾಮದ ಪಾಂಡವಪುರ-ಶ್ರೀರಂಗಪಟ್ಟಣ ರಸ್ತೆಯ ಬದಿಯಲ್ಲಿರುವ ಶಾಲೆಯು ಬೆಂಗಳೂರಿನ ಖಾಸಗಿ ಬ್ಯಾಂಕಿನಲ್ಲಿ ಪಡೆದ ಕೋಟ್ಯಂತರ ರೂ. ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಕ್ಕೆ ಬೀಗಮುದ್ರೆ ಹಾಕಿದ್ದು, ಕಳೆದ 9 ದಿನಗಳಿಂದ ನಿರಂತರವಾಗಿ ಮನೆಯಲ್ಲೇ ವಿದ್ಯಾರ್ಥಿಗಳು ಉಳಿದು ಶಿಕ್ಷಣದಿಂದ ವಂಚಿತರಾಗಿ ಅತಂತ್ರರಾಗಿದ್ದಾರೆ. ವಿದ್ಯಾರ್ಥಿಗಳ ಪಾಲಕರು ಆತಂಕದಿಂದ ಶಾಲೆಯ ಎದುರು ಜಮಾಯಿಸಿ ವಿದ್ಯಾರ್ಥಿಗಳಿಗೆ ಬದಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸದ ಶಾಲಾ ಆಡಳಿತ ಹಾಗೂ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಗೆ ನೆರವಾಗಿ ಯಾವುದೇ ಕ್ರಮ ಕೈಗೊಳ್ಳದ ಬಿಇಒ ಆರ್.ಪಿ.ಮಹೇಶ್ ಅವರ ನಡೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ದರಸಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಂಪುರ ಮುರುಳಿಮೋಹನ್ ಮಾತನಾಡಿ, ಕೇಂಬ್ರಿಡ್ಜ್ ಶಾಲಾ ಕಟ್ಟಡ ಸೀಜ್ ಆದ ಕಾರಣ 1 ರಿಂದ 10ನೇ ಶಾಲೆವರೆಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಇದೀಗ ಬೀದಿಗೆ ಬಿದ್ದು, ವಿದ್ಯಾರ್ಥಿಗಳು ಹಾಗೂ ಶಾಲೆಗೆ ದಾಖಲಿಸಿದ ಆ ಮಕ್ಕಳ ಪಾಲಕರ ಅಳಲು ಕೇಳಲು ಯಾರೊಬ್ಬರೂ ಮುಂದಾಗಿಲ್ಲ. ಇನ್ನೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ಸಮೀಪಿಸಲಿದ್ದು, ಆ ಮಕ್ಕಳ ಶಿಕ್ಷಣ ಭವಿಷ್ಯ ನಾಶವಾದಲ್ಲಿ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಮಂಡ್ಯ ರಕ್ಷಣಾ ವೇದಿಕೆ ಸಂಘಟನೆ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ಸೀಜ್ ಆಗಿರುವ ಕೇಂಬ್ರಿಡ್ಜ್ ಶಾಲೆ ವಿಚಾರದಲ್ಲಿ ಬಿಇಒ ಆರ್.ಪಿ.ಮಹೇಶ್ ಅವರು ನನಗೂ ಇದಕ್ಕೂ ಸಂಬಂಧವಿಲ್ಲ. ಇದು ಮೇಲಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಎರಡ್ಮೂರು ಬಾರಿ ಈ ಶಾಲೆಗೆ ಭೇಟಿ ನೀಡಿ ಇದರ ಮಾಲೀಕರೊಂದಿಗೆ ಬಿಇಒ ಚರ್ಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೆ ಶಾಲಾ ಮಾಲೀಕರು ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಾಗಿದ್ದು, ಬಿಇಒ ಅವರಿಗೂ ಹತ್ತಿರದ ಸಂಬಂಧಿ ಎಂಬ ವಿಚಾರ ಎಲ್ಲೆಡೆ ಹರಡಿದೆ. ಈ ಕಾರಣಕ್ಕೆ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬದಲಿ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ದನ-ಕರುಗಳು ಹಾಗೂ ಜಾನುವಾರುಗಳನ್ನು ಶಾಲೆಯ ಮುಂಭಾಗದಲ್ಲಿ ಕಟ್ಟಿ ಶಾಲಾ ಆಡಳಿತ, ಬಿಇಒ ಹಾಗೂ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಸರಗುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಎನ್.ಶ್ರೀಧರ್, ಮಾದೇಶ್, ರೈತ ಮುಖಂಡರಾದ ದರಸಗುಪ್ಪೆ ಮಂಜುನಾಥ್, ಕೂಡಲಕುಪ್ಪೆ ಜಯರಾಮು, ಸುನೀಲ್, ಸಮಾಜ ಸೇವಕ ರುಕ್ಮಾಂಗದ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.

ಬಿಇಒ ಸ್ಪಷ್ಟನೆ: ಕೇಂಬ್ರಿಡ್ಜ್ ಶಾಲೆಯ ಮಾಲೀಕರು ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು, ಅವರೂ ಸಂಬಂಧಿಕರೂ ಅಲ್ಲ. ಶಾಲೆ ಸೀಜ್ ಆಗಿದ್ದ ಕುರಿತು ನಾನು ಕಿರಿಯ ಅಧಿಕಾರಿ ಆಗಿರುವ ಕಾರಣ ಸೋಮವಾರ ಡಿಡಿಪಿಐ ಶಿವರಾಮೇಗೌಡ ಅವರೊಂದಿಗೆ ಶಾಲಾ ಆಡಳಿತದಿಂದ ಮಾಹಿತಿ ಪಡೆದು ಶಾಲೆ ತಕ್ಷಣ ತೆರೆಯುವಂತೆ ಸೂಚನೆ ನೀಡಲಾಗಿದೆ. ಶೀಘ್ರವೇ ಶಾಲೆಯನ್ನು ಮರು ಆರಂಭಿಸಲು ಕ್ರಮವಹಿಸಿರುವುದಾಗಿ ಬಿಇಒ ಆರ್.ಪಿ.ಮಹೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net