ಶಾಲೆ ಬಂದ್ ಮಾಡಿ ಪಾಲಕರ ಪ್ರತಿಭಟನೆ

31 SGN 1
Published on

ಶಿಗ್ಗಾಂವಿ: ತಾಲೂಕಿನ ಹಿರೇಮಲ್ಲೂರಿನ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಶಿಕ್ಷಕಿ ಶೈಲಜಾ ಟಿ. ಅವರನ್ನು ಅಮಾನತು ಮಾಡಿ ಬೇರೆ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಶಿಕ್ಷಕಿ ಶೈಲಜಾ ಅವರು ಎಸ್​ಡಿಎಂಸಿ, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆ ಇಲ್ಲದೆ ಶಾಲೆಯಲ್ಲಿ ತಮ್ಮದೇ ಆಡಳಿತ ನಡೆಸುತ್ತಿದ್ದಾರೆ. ಶಾಲೆಯ ಮೊದಲಿನ ಮುಖ್ಯೋಪಾಧ್ಯಾಯರು ನಿವೃತ್ತಿ ಹೊಂದಿದ್ದರಿಂದ ಅವರ ಸ್ಥಳಕ್ಕೆ ಶಿಕ್ಷಣ ಇಲಾಖೆಯಿಂದ ಶೈಲಜಾ ಟಿ. ಅವರನ್ನು ಪ್ರಭಾರ ಮುಖ್ಯೋಪಾಧ್ಯಾಯರನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಬೇರೊಬ್ಬರು ಕಾಯಂ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡರು. ಇದರಿಂದ ಶೈಲಜಾ ಅವರು ತನಗೆ ಸಿಕ್ಕ ಹುದ್ದೆ ಹೋಯಿತೆಂದು ಮಾನಸಿಕತೆಯಿಂದ ಶಾಲೆಯ ಉಳಿದ ಶಿಕ್ಷಕರೊಂದಿಗೆ ಮತ್ತು ಎಸ್​ಡಿಎಂಸಿ ಸಮಿತಿಯೊಂದಿಗೆ ಪ್ರತಿದಿನ ಜಗಳವಾಡುತ್ತ ಶಾಲೆಯ ವಾತಾವರಣ ಹಾಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಶಿಕ್ಷಕಿ ಶೈಲಜಾ ಮತ್ತು ಆಕೆಯ ಪತಿ ಶಾಲೆಯಲ್ಲಿ ಪದೇಪದೆ ಜಗಳವಾಡುತ್ತಿರುವುದರಿಂದ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಶಿಕ್ಷಕಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಈ ಕುರಿತು ತಾಲೂಕು ಶಿಕ್ಷಣಾಧಿಕಾರಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇಲ್ಲಿನ ಸಮಸ್ಯೆ ಕುರಿತು ಡಿಡಿಪಿಐ ಅವರ ಗಮನಕ್ಕೆ ತರುತ್ತೇನೆ. ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಮನವಿ ಮಾಡಿದರು. ಆದರೆ, ಗ್ರಾಮಸ್ಥರು, ಶಿಕ್ಷಕಿ ಶೈಲಜಾ ಅವರನ್ನು ಅಮಾನತು ಮಾಡುವವರೆಗೆ ಹೋರಾಟ ಕೈಬಿಡುವುದಿಲ ಎಂದು ಪಟ್ಟು ಹಿಡಿದರು.

ನಂತರ ಪ್ರತಿಭಟನಾಕಾರರು ಡಿಡಿಪಿಐ ಅವರನ್ನು ದೂರವಾಣಿ ಮೂಲಕ ಸಂರ್ಪಸಿ, ಶಾಲೆಯಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆ ಕುರಿತು ವಿವರಿಸಿ ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ, ಡಿಡಿಪಿಐ ಬೇರೆ ಕೆಲವು ಶಾಲೆಗಳ ಕುರಿತು ರ್ಚಚಿಸುವ ಕೆಲಸಗಳಿವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿದ್ದ ಪ್ರಕಾಶ ಕ್ಯಾಲಕೊಂಡ ಮತ್ತು ಸಲೀಂ ಯಳವಟ್ಟಿ ದೂರಿದರು. ಡಿಡಿಪಿಐ ಅವರಿಂದ ಸಮರ್ಪಕ ಭರವಸೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದಾರೆ.

ಶಿವನಗೌಡ ಸಣ್ಣ ಲಿಂಗನಗೌಡ್ರ, ಫಕೀರೇಶ ವಾಲ್ಮೀಕಿ, ರಮೇಶ ಕರಿಗೌಡ್ರ, ಇಮಾಮಸಾಬ ನದಾಫ, ಈಶ್ವರಗೌಡ ಹುತ್ತನಗೌಡ್ರ,

ಲಕ್ಷ್ಮಣ ಮಡಿವಾಳ, ಅಶೋಕ ಬೋದನೂರ, ದ್ಯಾವಪ್ಪ ದೂಡ್ಡಮನಿ, ಕಲ್ಲನಗೌಡ ಕರಿಗೌಡ್ರ, ಶಿವನಗೌಡ ಹುತ್ತನಗೌಡ್ರ, ಸಂತೋಷ ದೂಡ್ಡಮನಿ, ರೂಪಾ ಹುತ್ತನಗೌಡ್ರ, ರಸೂಲಸಾಬ ನದಾಫ್, ಸಲೀಂ ಯಳವಟ್ಟಿ, ಪ್ರಕಾಶ ಕ್ಯಾಲಕೊಂಡ, ರಾಘವೇಂದ್ರ ಸಣ್ಣತಂಗಿ, ನಿಂಗರಾಜ ಹರಿಜನ, ಖಾದರಬಾಷ ನದಾಫ, ದ್ಯಾವಪ್ಪ ಹರಿಜನ, ಯಲಪ್ಪ ಹರಿಜನ, ಮೌಲಸಾಬ ಕಡೆಮನಿ, ಮೌಸಾಬ ನಂದಳ್ಳಿ , ಸುಲೆಮಾನ ಕಳಸ , ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net