ವಸತಿ ಶಾಲೆ ಪ್ರಾಚಾರ್ಯೆ ಮರು ನಿಯೋಜನೆಗೆ ಪಾಲಕರ ವಿರೋಧ

Published on

ಡೂರು: ತಾಲೂಕಿನ ವಸತಿ ಶಾಲೆಯೊಂದರಲ್ಲಿ 8 ತಿಂಗಳ ಹಿಂದೆ ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪ್ರಕರಣ ಸಂಬಂಧ ಬೇರೆಡೆಗೆ ನಿಯೋಜನೆಗೊಂಡಿದ್ದ ಇಲ್ಲಿನ ಪ್ರಾಚಾರ್ಯೆಯನ್ನು ಮತ್ತದೇ ಶಾಲೆಗೆ ನಿಯೋಜನೆ ಮಾಡಿರುವ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ) ಕಾರ್ಯನಿರ್ವಾಹಕ ನಿರ್ದೇಶಕರ ಆದೇಶಕ್ಕೆ ವಸತಿ ಶಾಲೆ ಪಾಲಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಸತಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಾಚಾರ್ಯೆ ನೇರವಾಗಿ ಭಾಗಿಯಾಗಿದ್ದರು. ಅವರ ಬೇಜವಾಬ್ದಾರಿತನ ಕೂಡ ಪ್ರಕರಣ ನಡೆಯಲು ಕಾರಣವಾಯಿತು ಮತ್ತು ಹುದ್ದೆಗೆ ಚ್ಯುತಿ ಬರುತ್ತದೆ ಎನ್ನುವ ಕಾರಣಕ್ಕೆ ಇಡೀ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರು ಮತ್ತು ಪಾಲಕರಿಂದ ಕೇಳಿಬಂದಿತ್ತು. ಆದ್ದರಿಂದ ತನಿಖೆ ನ್ಯಾಯಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಜಿಪಂ ಸಿಇಒ ಅವರು ಪ್ರಾಚಾರ್ಯೆಯನ್ನು ಬೇರೆಡೆಗೆ ನಿಯೋಜನೆ ಮಾಡಿ ಆದೇಶಿಸಿದ್ದರು. ಆದರೀಗ ಅದೇ ಪ್ರಾಚಾರ್ಯೆನ್ನು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತದೇ ಶಾಲೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಿರುವುದು ಪಾಲಕರು ಮತ್ತು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಲೈಂಗಿಕ ದೌರ್ಜನ್ಯದ ತೀವ್ರತೆ ಅರಿಯದೆ ಅಧಿಕಾರಿಗಳು ಈ ರೀತಿ ಆದೇಶ ಹೊರಡಿಸಿರುವುದು ತಪ್ಪು. ಪ್ರಾಚಾರ್ಯೆ ಮತ್ತೆ ಈ ಶಾಲೆಗೆ ಬಂದರೆ ಮಕ್ಕಳ ಮೇಲೆ ಒತ್ತಡ ಹಾಕುವ ಸಾಧ್ಯತೆಯಿದೆ. ಸಾಕ್ಷಿಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಈ ಎಲ್ಲ ಕಾರಣದಿಂದಾಗಿಯೇ ಜಿಪಂ ಸಿಇಒ ಪ್ರಾಚಾರ್ಯೆಯನ್ನು ಬೇರೆಡೆಗೆ ನಿಯೋಜನೆ ಮಾಡಿದ್ದರು. ಆದರೆ ಈಗ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ಏಕಾಏಕಿ ಮರು ನಿಯೋಜನೆ ಮಾಡಿ ಆದೇಶ ಹೊರಡಿಸಿರುವುದರಿಂದ ಜಿಪಂ ಸಿಇಒ ಅವರ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ಆದ್ದರಿಂದ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶವನ್ನು ಹಿಂಪಡೆಯಬೇಕು ಎನ್ನುವುದು ಪಾಲಕರ ಒತ್ತಾಯ.
ವಸತಿ ಶಾಲೆಯಲ್ಲಿ ಶನಿವಾರ ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಮೃತಪಟ್ಟಿರುವುದನ್ನು ಸಬೂಬು ಮಾಡಿಕೊಂಡಿರುವ ಅಧಿಕಾರಿಗಳು ಈ ಹಿಂದಿನ ಪ್ರಾಚಾರ್ಯೆಯನ್ನು ಶಾಲೆಗೆ ಮರಳಿ ನಿಯೋಜನೆ ಮಾಡಿದ್ದಾರೆ. ದೌರ್ಜನ್ಯ ಪ್ರಕರಣ ಬಯಲಿಗೆ ಬಂದ ಸಂದರ್ಭ ಕೆಲವು ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆಯಿಸಿಕೊಂಡು ನಮ್ಮ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಸುಳ್ಳು ಹೇಳುವಂತೆ ಪ್ರಾಚಾರ್ಯರು ಒತ್ತಾಯಿಸಿದ್ದರು ಮತ್ತು ಹೋರಾಟದ ಮುಂಚೂಣಿಯಲ್ಲಿದ್ದವರನ್ನು ನಿಯಂತ್ರಿಸುವ ಪ್ರಯತ್ನ ಪ್ರಾಚಾರ್ಯೆ ನಡೆಸಿದ್ದರು. ಆದರೆ ಈಗ ಅಧಿಕಾರಿಗಳು ಇದೆಲ್ಲವನ್ನೂ ಮರೆತು ಈ ಹಿಂದಿನ ಪ್ರಾಚಾರ್ಯೆಯನ್ನು ಮರಳಿ ನಿಯೋಜನೆ ಮಾಡಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ವಿದ್ಯಾರ್ಥಿನಿಯ ಪಾಲಕ ಮಲ್ಲಪ್ಪನಹಳ್ಳಿ ಷಡಾಕ್ಷರಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net