

ಮಡಿಕೇರಿ: ಇಂದು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಪಾಲಕರ ಪಾತ್ರ ಮುಖ್ಯವಾಗಿದೆ ಎಂದು ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಶಿವಕುಮಾರ್ ಹೇಳಿದರು.
ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ ಬೇಟಿ ಬಚಾವೊ ಬೇಟಿ ಪಡಾವೋ ಕಾರ್ಯಕ್ರಮದಡಿಯಲ್ಲಿ ನಡೆದ ಅಪೌಷಿಕ್ಟ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಾರಣ ಮಕ್ಕಳ ಪಾಲಕರು ಇಂದು ಉದ್ಯೋಗದ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಮಕ್ಕಳನ್ನು ಶಾಂತವಾಗಿರಿಸಲು ಸಿಹಿತಿನಿಸು, ಬಿಸ್ಕೆಟ್, ಚಿಪ್ಸ್ ಇಂತಹ ಅಂಗಡಿಗಳಿಂದ ಖರೀದಿಸಿದ ಪದಾರ್ಥ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮಕ್ಕಳ ಎಲ್ಲಾ ತಾಯಂದಿರು ಮುಖ್ಯವಾಗಿ ಗಮನಿಸಬೇಕಿದೆ ಎಂದರು.
ಮನೆಯಲ್ಲಿ ತಯಾರಿಸಿದ ಆಹಾರ ಪಾದರ್ಥಗಳನ್ನು ನೀಡುವುದು ಉತ್ತಮ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಜೊತೆ ಹಣ್ಣುಗಳು, ಮೊಟ್ಟೆ, ಕಾಳುಗಳನ್ನು ಹಾಲು ನೀಡಿ ಹಾಗೂ ಮಕ್ಕಳ ಸ್ವಚ್ಛತೆ ಕಾಪಾಡಿ ಎಂದು ಹೇಳಿದರು.
ನಂತರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಮಾತನಾಡಿ, ಪಾಲಕರು ಇತ್ತೀಚೆಗೆ ಮಗುವಿಗೆ ಮೊಬೈಲ್ ಗಳನ್ನು ನೀಡುತ್ತಿದ್ದಾರೆ. ಬದಲಾಗಿ ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ಕಡೆ ಮಕ್ಕಳ ಮನವೊಲಿಸಿ ಬದಲಿಸುವುದರೊಂದಿಗೆ ಉತ್ತಮ ಸಾಮಾಜದ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ಮಗುವಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ ಮುದೋಳ್, ಹಾಗೂ ಮೇಲ್ವಿಚಾರಕಿ ಸಾವಿತ್ರವ್ವ, ಜೆಂಡರ್ ಸ್ಷೆಷಲಿಸ್ಟ್ ಎಸ್.ಆರ್.ಕೇಶಿನಿ, ಪೋಷಣಾಭಿಯಾನ ತಾಲೂಕು ಸಂಯೊಜಕಿ ರಂಜಿತ, ಆರೋಗ್ಯ ಇಲಾಖೆಯ ಡಯಟಿಷಿಯನ್ ನಯನಾ ಹಾಗೂ ಹೇಮಲತಾ, ಮತ್ತು ಅಪೌಷ್ಠಿಕ ಮಕ್ಕಳು ಹಾಗೂ ಅವರ ಪಾಲಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.