

ಭಾಲ್ಕಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪಾಲಕರ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆ ಶಿಕ್ಷಣದಲ್ಲಿ ಅಡಗಿದೆ. ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ ೪೦ ಮಕ್ಕಳಿಂದ ಶಿಕ್ಷಣ ಸಂಸ್ಥೆಯಲ್ಲಿಂದು ಸಾವಿರಾರೂ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪಾಲಕರ ನಿರೀಕ್ಷೆಯಂತೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಕೋರ್ಸ್ ಆಯ್ಕೆಗೆ ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕು. ಇದರಿಂದ ಮಕ್ಕಳು ಆಸಕ್ತಿಯಿಂದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಎಂಜಿನಿಯರ್ ವಿಲಾಸ ಮಾಶೆಟ್ಟೆ, ಉಪಪ್ರಚಾರ್ಯ ಸಿದ್ರಾಮ ಗೊಗ್ಗಾ, ರಾಜಕುಮಾರ ಸಿರ್ಗಾಪುರೆ, ಕಚೇರಿ ಅಧೀಕ್ಷಕ ಗಣಪತಿ ಭೂರೆ, ಉಪನ್ಯಾಸಕರಾದ ಶ್ರೀನಿವಾಸ ರಡ್ಡಿ, ಗೋಪಿನಾಥ, ರಾಘವೇಂದ್ರ, ಅಜಿಮೋದ್ದಿನ್, ಆಂಜನೇಯವೇಲು, ನೀರಾ ಷರೀಫ್, ಸದಾ ವಿಜಯ, ನೀರಜ್ ಶ್ರೀಕಾಂತ, ಓಂಕಾರ, ಸೋಮನಾಥ ಅಕ್ಕಣ್ಣ, ಶಶಿಧರ ಕುಲಕರ್ಣಿ, ಪರೀಕ್ಷಾ ಕಾರ್ಯದರ್ಶಿ ಶಿವಪ್ರಕಾಶ ಕುಂಬಾರ, ವಸತಿ ನಿಲಯದ ಮೇಲ್ವಿಚಾರಕರಾದ ಮನೋಹರ ಕಾಡೋದೆ, ಪ್ರೇಮಾ ಇತರರಿದ್ದರು.
ವಿದ್ಯಾರ್ಥಿನಿ ಸಮೀಕ್ಷಾ ಗುತ್ತೇದಾರ್ ಸಂಗಡಿಗರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಲಚಮ್ಮಾ ರಡ್ಡಿ ನಿರೂಪಣೆ ಮಾಡಿ ವಂದಿಸಿದರು.
ಸಾಧಕರ ಸನ್ಮಾನ: ಪಿಯುಸಿ, ಸಿಇಟಿ ಮತ್ತು ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ಪಡೆದು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೀಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ೭೨೦ಕ್ಕೆ ೬೯೧ ಅಂಕ ಪಡೆದ ಸಂಜನಾ ದಶವಂತ, ಸಿಇಟಿಯಲ್ಲಿ ರಾಜ್ಯಕ್ಕೆ ೩೮ನೇ ರ‍್ಯಾಂಕ್ ಪಡೆದ ಮಹೇಶ ಚನ್ನಬಸವರಾಜ ಮತ್ತು ಪಿಯುಸಿಯಲ್ಲಿ ೬೦೦ಕ್ಕೆ ೫೯೩ ಅಂಕ ಪಡೆದ ರಕ್ಷಿತಾ ಸಂಜೀವಕುಮಾರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಕೋಟ್
ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆಯುತ್ತಿರುವುದು ಇಲ್ಲಿಯ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಮುಂದಿನ ದಿನಗಳಲ್ಲಿ ರಾಷ್ಟ್ರಟ್ಟದ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯಿಂದ ಟಾಪ್ ೧೦ನೊಳಗೆ ರ‍್ಯಾಂಕ್ ತರುವ ಗುರಿ ಹೊಂದಲಾಗಿದೆ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು
ಬಸವಣ್ಣನವರು ಆಚಾರವೇ ಸ್ವರ್ಗ ಎಂದಿದ್ದಾರೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ನಡುವಳಿಕೆ, ಮನಸ್ಸು, ಶರೀರ ಉತ್ತಮವಾಗಿರಿಸಿಕೊಂಡರೆ ಸಾಧನೆಯ ಶಿಖರವನ್ನೇರಲು ಸಾಧ್ಯ.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ