ಕುಶಾಲನಗರ: ಪಟ್ಟಣದ ಫಾತಿಮಾ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ತರಗತಿಗಳನ್ನು ಸೆ.1ರಿಂದ ಆರಂಭಿಸಲು ತೀರ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಜಫ್ರಿ ಡಿಸಿಲ್ವಾ ಮಾತನಾಡಿ, ಕೋವಿಡ್-19 ಭೀತಿ ಹಿನ್ನ್ನೆಲೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಿ ಶಾಲೆ ಆರಂಭಿಸಲು ಸೂಚನೆ ನೀಡಿದೆ. ಈ ಸಂಬಂಧ ಪಾಲಕರ ಅಭಿಪ್ರಾಯ ಸಂಗ್ರಹಿಸಿ ಸರ್ವಸಮ್ಮತದ ಒಪ್ಪಿಗೆ ಮೇರೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ತರಗತಿಗಳನ್ನು ಪ್ರಾರಂಭಿಸುವಾಗ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಪೂರೈಕೆ ಕಷ್ಟ ಸಾಧ್ಯವಾಗಿರುವ ಕಾರಣ ದಾನಿಗಳ ನೆರವಿನಿಂದ ಅವುಗಳನ್ನು ಪಡೆದುಕೊಳ್ಳುವಂತೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಲು ಕಷ್ಟಸಾಧ್ಯ. ಪಾಳಿ ಮಾದರಿಯಲ್ಲಿ ಪಾಠ ವಚನಗಳನ್ನು ನಡೆಸಲು ಅಸಾಧ್ಯವಾಗಿದ್ದು, ಒಂದು ದಿನ ಬಿಟ್ಟು ಮತ್ತೊಂದು ದಿನದಂತೆ ತರಗತಿಗಳನ್ನು ನಡೆಸಲು ತಾವೆಲ್ಲರೂ ಒಪ್ಪಿಗೆ ಸೂಚಿಸಿದ ಮೇರೆಗೆ ಮೂರನೇ ನಿಯಮದ ಪ್ರಕಾರ ಸೆ.1ರ ನಂತರ ತರಗತಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಕರಾದ ಸರ್ದಾರ್ ಬಾಷಾ, ಅಮೂಲ್ ರಾಜ್, ಮಮತಾ, ಫ್ರಾನ್ಸಿಸ್, ಜಾಯ್ಸ್ ಡಿಸೋಜಾ, ಲಿಲ್ಲಿ, ಅಂಥೋಣಿ ಕಮಲನಾಥನ್ ಹಾಗೂ ಪಾಲಕರು ಹಾಜರಿದ್ದರು.