

ರಟ್ಟಿಹಳ್ಳಿ: ತಾಲೂಕಿನ ಹಿರೇಮಾದಪುರ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಪಾಲಕರು ಬುಧವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ಅಂಜುಮನ್ ಕಮಿಟಿ ಅಧ್ಯಕ್ಷ ರಹಮತಉಲ್ಲಾ ದೊಡ್ಡಮನಿ ಮಾತನಾಡಿ, ಶಾಲೆಯಲ್ಲಿ 33 ವಿದ್ಯಾರ್ಥಿಗಳಿದ್ದಾರೆ. ಈ ಮೊದಲು ಮೂವರು ಶಿಕ್ಷಕರಿದ್ದರು. ಒಂದೂವರೆ ತಿಂಗಳ ಹಿಂದೆ ಒಬ್ಬ ಶಿಕ್ಷಕಿ ನಿವೃತ್ತಿಯಾಗಿದ್ದಾರೆ. ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ. ಶೀಘ್ರವೇ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಶಾಲೆಗೆ ಭೇಟಿ ನೀಡಿದ ಸಿಆರ್‌ಪಿ ಚೇತನಕುಮಾರ ಅವರು ಪಾಲಕರೊಂದಿಗೆ ಚರ್ಚಿಸಿದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಒಬ್ಬ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪಾಲಕರು ಪ್ರತಿಭಟನೆ ಕೈಬಿಟ್ಟರು.
ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್ ಮುಲ್ಲಾ, ದಾದಾಪೀರ ಅಂಗಡಿ, ನಜೀರ ಬನ್ನಿಕೋಡ, ದಾದು ಕೆಂಗೊಂಡ, ಆಸ್ಮ ಅಂಗಡಿ, ಶರೀನಾ ಮುಲ್ಲಾ ಪಾಲಕರು ಉಪಸ್ಥಿತರಿದ್ದರು.