

ಲಿಂಗಸುಗೂರು: ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯ ನಿರ್ಮಿಸಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ(ಪಿಯುಸಿ) ವಸತಿ ನಿಲಯ ನೂತನ ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿ, ವಿದ್ಯಾರ್ಥಿಗಳು ಪಾಲಕರ ಕನಸು ನನಸಾಗಿಸಲು ಶ್ರಮಿಸಬೇಕು.
ಹಲವು ದಶಕಗಳ ಹಿಂದೆ ಗ್ರಾಮೀಣ ಭಾಗದ ಬಡ ಮತ್ತು ರೈತಾಪಿ ವರ್ಗದ ಮಕ್ಕಳು ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಲು ಹಂತ ಹಂತವಾಗಿ ಸರ್ಕಾರ ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ವ್ಯವಸ್ಥೆ ಮಾಡುತ್ತ ಬರುತ್ತಿದೆ.
ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿನ ಸೌವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದುಶ್ಚಟಗಳ ದಾಸರಾಗದೆ, ಜಗಳ, ದಬ್ಬಾಳಿಕೆ, ದೌರ್ಜನ್ಯವೆಸಗದೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಎಸ್ಸಿ, ಎಸ್ಟಿ ಬಾಲಕ, ಬಾಲಕಿಯರ ವಸತಿ ನಿಲಯಗಳ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚುತ್ತಿದ್ದರಿಂದ ಹೆಚ್ಚುವರಿಯಾಗಿ ವಸತಿ ನಿಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ್ ಮಾತನಾಡಿ, 2021ರಲ್ಲಿ ಶಂಕುಸ್ಥಾಪನೆಗೊಂಡ ಸದರಿ ವಸತಿ ನಿಲಯ 5.50 ಕೋಟಿ ರೂ. ವೆಚ್ಚದಲ್ಲಿ 18 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, 200 ವಿದ್ಯಾರ್ಥಿಗಳು ವಸತಿ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ಮತ್ತೊಂದು ವಸತಿ ನಿಲಯ ಮಂಜೂರು ಮಾಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ತಾಪಂ ಇಒ ಅಮರೇಶ ಯಾದವ್, ಪಿಎಸ್‌ಐ ಹನುಮಂತಪ್ಪ ನಾಯಕ, ಶಿರಸ್ತೇದಾರ ಮುಕ್ತುಂಸಾಬ್, ದೇವರಾಜ, ಮಂಜುನಾಥ ಇತರರು ಇದ್ದರು.