

ಹರಪನಹಳ್ಳಿ: ಪಾಲಕರ ಕಷ್ಟ ಅರಿತು ವಿದ್ಯಾಭ್ಯಾಸ ಮಾಡಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಟ್ಟಣದ ಗೊರವಿನ ತೋಟದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದರು. ವಿಜಯನಗರ ಹಾಗೂ ದಾವಣಗೆರೆ ಸುತ್ತ್ತಲಿನ ಹಲವಾರು ತಾಲೂಕುಗಳಿಂದ ಹರಪನಹಳ್ಳಿಗೆ ಓದಲು ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಮಸ್ಯೆ ಎದುರಾಗಿತ್ತು.
ಇದನ್ನು ಮನಗಂಡು ಸಿಎಂಗೆ ಒತ್ತಡ ಹಾಕಿ ಹಣ ಮಂಜೂರು ಮಾಡಿಸಿ ಹಾಸ್ಟೆಲ್ ನಿರ್ಮಾಣ ಮಾಡಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ತಂದೆ-ತಾಯಿ ಕನಸನ್ನು ನನಸು ಮಾಡಲು ಶ್ರದ್ಧೆಯಿಂದ ಓದಿ, ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪಟ್ಟಣವನ್ನು ಅವಲಂಬಿಸಿದ್ದಾರೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ಹಾಸ್ಟೆಲ್ ಆರಂಭಿಸಲಾಗಿದೆ ಎಂದರು. ಮೇಲ್ವಿಚಾರಕಿ ಪ್ರೇಮಾವತಿ, ಅನ್ನಪೂರ್ಣ, ನಿರ್ಮಲಾ, ವಿದ್ಯಾವತಿ ಇತರರಿದ್ದರು.