ಪಾಲಕರು ಮಕ್ಕಳ ಬಾಲ್ಯ ಕಸಿದುಕೊಳ್ಳದಿರಿ

HUN-MAR-5-2(STAR KID MONTESSERY SCHOOL)
Published on

ಹುಣಸೂರು: ಜೀವನದ ಬಹುಸುಂದರ ಮತ್ತು ನೆನಪಿನಲ್ಲಿ ಉಳಿಯುವಂತಹ ಮಕ್ಕಳ ಬಾಲ್ಯವನ್ನು ಪಾಲಕರು ಕಸಿದುಕೊಳ್ಳಬಾರದು ಎಂದು ನಗರದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮತ್ತು ಮಕ್ಕಳ ಸಾಹಿತಿ ಡಾ.ಮಾದುಪ್ರಸಾದ್ ಸಲಹೆ ನೀಡಿದರು.

ಮಂಗಳವಾರ ನಗರದ ಸ್ಟಾರ್ ಕಿಡ್ ಮಾಂಟೆಸ್ಸರಿ ಶಾಲೆಯ 3ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ವಿವಿಧ ಕನಸುಗಳೊಂದಿಗೆ ಒತ್ತಡ ಹೇರಿ ಓದಿಸುವ ಧಾವಂತದಲ್ಲಿ ಪಾಲಕರು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು. ಶಿಕ್ಷಣದ ಪರಿಕಲ್ಪನೆಗಳನ್ನು ಸರಿಯಾಗಿ ಪಾಲಕರು ಅರ್ಥಮಾಡಿಕೊಳ್ಳಬೇಕಿದೆ.

ಹಿಂದಿನ ಕಾಲದ ಗುರುಕುಲ ಪದ್ಧತಿಯಲ್ಲಿ ವಯೋಮಾನ ಮುಖ್ಯವಾಗುತಿತ್ತು. ಶಿಕ್ಷಣದಲ್ಲಿ ಮೌಲ್ಯಗಳು ಮಹತ್ವ ವಹಿಸುತ್ತಿದ್ದವು. ಆದರೆ, ಈಗ ಶಿಕ್ಷಣ ಪ್ರತಿಷ್ಠೆಯ ಸರಕಾಗಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. ಬಾಲ್ಯ ಬದುಕಿನ ಅಮೂಲ್ಯಘಟ್ಟವಾಗಿದ್ದು ತಾಯಿ, ತಂದೆಯ ಜತೆಗೆ ಮಕ್ಕಳು ಸೆಳೆತವನ್ನು ಅನುಭವಿಸುವ ಅಗತ್ಯವಿದೆ. ಇಂತಹ ಮನೋ ಸುಖವನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಕಸಿದುಕೊಳ್ಳಬಾರದು ಎಂದರು.

ಇದೀಗ ಆಧುನಿಕ ತಂತ್ರಜ್ಞಾನ ಮತ್ತು ಅವಸರದ ಜೀವನಶೈಲಿ ಕೂಡ ಪಾಲಕರನ್ನು ಮಕ್ಕಳ ಕುರಿತಾಗಿ ಗಮನಹರಿಸುವತ್ತ ವಿಫಲಗೊಳಿಸಿವೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಉಣಬಡಿಸುವ ಪ್ರವೃತ್ತಿ ನಿಲ್ಲದ ಹೊರತು ಮಕ್ಕಳ ನಿಜವಾದ ಪ್ರತಿಭೆ ಅರಳಲು ಸಾಧ್ಯವಿಲ್ಲ. ನೂತನ ತಂತ್ರಜ್ಞಾನಗಳ ಬಳಕೆ ಅವಶ್ಯವಿದೆ ನಿಜ, ಅದರೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುವಂತಹ ಪ್ರವೃತ್ತಿಯಿಂದ ಪಾಲಕರಿಗೂ ಮತ್ತು ಸಮಾಜಕ್ಕೆ ಕಂಟಕಪ್ರಾಯವಾಗುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಚಲನಚಿತ್ರ ನಟ ಕುಮಾರ್ ಅರಸೇಗೌಡ ಮಾತನಾಡಿ, ಪಾಲಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ತಿಳಿಸಿದರು. ಕಾರ್ಯಮದಲ್ಲಿ ಸಂಸ್ಥೆಯ ಮುಖ್ಯಸ್ಥ ಮನುಗೌಡ, ಕುಮುದಿನಿ ಹಾಗೂ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net