ಮಕ್ಕಳ ಭವಿಷ್ಯ ರೂಪಿಸುವವರು ಪಾಲಕರು

TKE kasapa
ತರೀಕೆರೆಯಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಟಿ.ದಾದಾಪೀರ್, ಸುನೀತಾ, ಎ.ಸಿ.ಚಂದ್ರಪ್ಪ, ನವೀನ್ ಪೆನ್ನಯ್ಯ, ಬಿ.ಎಸ್.ಭಗವಾನ್ ಇತರರಿದ್ದರು.
Published on

ತರೀಕೆರೆ: ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರ ಕೈಯಲ್ಲಿದೆಯೇ ಹೊರತು ಯಾವುದೇ ಭಾಷಾ ಮಾಧ್ಯಮದಿಂದಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಮಂಗಳವಾರ ಗಿರಿನಗರದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದಿಂದ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತವರು ಸಂಸ್ಕಾರಯುತ ಬದುಕು ನಡೆಸುತ್ತಿದ್ದು, ಪಾಲಕರ ಪಾಲನೆ ಜವಾಬ್ದಾರಿಯುತವಾಗಿ ನಿಭಾಯಿಸಿ ಅವರನ್ನು ವೃದ್ಧಾಶ್ರಮಗಳಿಂದ ದೂರವಿಟ್ಟಿದ್ದಾರೆ. ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗಿ ಶಿಕ್ಷಣ ಕಲಿತವರು ವಿದೇಶಕ್ಕೆ ಹೋಗಿ ಹಣ ಸಂಪಾದನೆ ಮಾಡುತ್ತ ಪಾಲಕರನ್ನೇ ದೂರವಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾನಪದರು ವಿದ್ಯಾವಂತರಲ್ಲದಿದ್ದರೂ ಎಲ್ಲರನ್ನೂ ಜತೆಗೆ ಮುನ್ನಡೆಸಿಕೊಂಡು ಹೋಗುವ ಗುಣ ಮತ್ತು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಇಂದಿನ ಪೀಳಿಗೆ ಇದೇ ದಾರಿಯಲ್ಲಿ ಸಾಗಲು ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ಮನ ಪರಿರ್ವತಿಸುವಂಥ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಮಾತನಾಡಿ, ಕಸಾಪದಿಂದ ಜಿಲ್ಲಾದ್ಯಂತ ನಡೆಯುತ್ತಿರುವ ಮನೆಯಂಗಳದ ಕಾರ್ಯಕ್ರಮ ಅಡುಗೆ ಮನೆಯವರೆಗೂ ವ್ಯಾಪಿಸಿದೆ. ಇದು ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಸಹೋದರತೆ, ಸಮಾನತೆ ಹಾಗೂ ಸ್ವಾತಂತ್ರ್ಯದ ಅಂಶಗಳನ್ನೇ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರ ಸಮಾನತೆ, ಸಾಮಾಜಿಕ ಕ್ರಾಂತಿ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ, ಪದಾಧಿಕಾರಿಗಳಾದ ಎ.ಸಿ.ಚಂದ್ರಪ್ಪ, ಬಿ.ಎಸ್.ಭಗವಾನ್, ಇಮ್ರಾನ್ ಅಹ್ಮದ್ ಬೇಗ್, ನಾಗೇನಹಳ್ಳಿ ಎಚ್.ತಿಮ್ಮಯ್ಯ, ಸುನೀತಾ, ಎಚ್.ಆರ್.ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net