

ಈ ಹಿಂದೆ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಚಿಕಿತ್ಸೆಗೆ ಕರೆತರುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ತಂದೆ ತಾಯಿಗಳೇ ಮಕ್ಕಳನ್ನು ಚಿಕಿತ್ಸೆಗೆ ಕರೆತರುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಮತ್ತು ಸಾಧಕ ವೈದ್ಯರಿಗೆ ‘ವೈದ್ಯಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮದು ಮಕ್ಕಳಲ್ಲಿ ಮಧುಮೇಹ, ಹೃದಯಾಘಾತ ಹೆಚ್ಚಾಗುತ್ತಿದೆ. ಮಕ್ಕಳ ಮದುವೆ ಮಾಡಬೇಕಾದರೆ ಹುಟ್ಟಿನ ದಿನಾಂಕ ನೋಡುತ್ತೇವೆ. ಆದರೀಗ ಅದರ ಜತೆಗೆ ಅವರ ಆರೋಗ್ಯವನ್ನು ಪರಿಶೀಲಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಭಾರತದಲ್ಲಿ 10 ಕೋಟಿ ಜನರಲ್ಲಿ ಸಕ್ಕರೆ ಕಾಯಿಲೆ ಇದೆ. ಇನ್ನೂ 10 ಕೋಟಿ ಸಕ್ಕರೆ ಕಾಯಿಲೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಇವು ನಗರವಾಸಿಗಳ, ಶ್ರೀಮಂತರ ಕಾಯಿಲೆ ಎನ್ನುತ್ತಿದ್ದವು. ಆದರೆ, ಇದೀಗ ಗ್ರಾಮಾಂತರ ಪ್ರದೇಶದಲ್ಲಿ, ಬಡವರಲ್ಲಿ, ಕೂಲಿ ಕಾರ್ಮಿಕರಲ್ಲೂ ಹೆಚ್ಚಾಗುತ್ತಿದೆ. ಸದ್ಯ ಮಧುಮೇಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಜಾತ್ಯತೀತ ಕಾಯಿಲೆಗಳಾಗಿ ಬಿಟ್ಟಿವೆ ಎಂದರು.
ಅಹಂಕಾರ, ಅನುಮಾನ, ಅಸೂಯೆ ಬಿಟ್ಟು ಬದುಕಬೇಕು. ವಾಕಿಂಗ್, ವ್ಯಾಯಾಮ, ಉಪವಾಸ, ಒಳ್ಳೆಯ ನಿದ್ದೆ ಮಾಡಬೇಕು. ಉತ್ತಮ ಗೆಳೆಯರನ್ನು ಸಂಪಾದಿಸಬೇಕು. ಉತ್ತಮ ಗೆಳೆಯರ ಬಳಗ ಇರುವವರ ಆಯಸ್ಸು ಹೆಚ್ಚಾಗುತ್ತದೆ. ನಗು ಮುಖ್ಯವೂ ಬಹಳ ಮುಖ್ಯ. ಕುಟುಂಬ ಸದಸ್ಯರ ಜತೆ ಊಟ ಮಾಡುವುದು, ಬೇರೆಯವರ ಬಗ್ಗೆ ಒಳ್ಳೆಯದು ಮಾತನಾಡುವುದನ್ನು ಬಿಟ್ಟರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಡಿಕೊಳ್ಳಬಹುದು ಎಂದರು.