

ನರೇಗಲ್ಲ: ತಂದೆ-ತಾಯಿ ಸ್ವತಃ ಭಗವತ್ ಸ್ವರೂಪರೆ. ಅವರನ್ನು ಯಾರು ಅನನ್ಯ ಭಾವದಿಂದ ಪೂಜಿಸುತ್ತಾರೋ ಅವರು ಸದ್ಗತಿ ಪಡೆಯುತ್ತಾರೆ. ತಂದೆ-ತಾಯಿಯನ್ನು ಪೂಜಿಸುವುದನ್ನು ನಾವು ಗಣಪತಿಯಿಂದ ಕಲಿಯಬೇಕಿದೆ. ಹೆತ್ತವರನ್ನು ಪೂಜಿಸುವುದರಿಂದ 33 ಕೋಟಿ ದೇವತೆಗಳ ಪೂಜೆ ಮಾಡಿದ ಪುಣ್ಯ ದೊರಕುತ್ತದೆ ಎಂದು ಸೂಡಿ ಶ್ರೀಚಿದಂಬರೇಶ್ವರ ದೇವಸ್ಥಾನದ ಭುಜಂಗಶರ್ಮಾ ಜೋಶಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಗಣ ಹೋಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಥರ್ವಶೀರ್ಷ ಮಂತ್ರವು ಶ್ರೀ ಗಣೇಶನ ಮಹತ್ವವನ್ನು ತಿಳಿಸುತ್ತದೆ. ಮೂರು ಲೋಕಕ್ಕೂ ಒಡೆಯನಾಗಿರುವವನು ಶ್ರೀಗಣೇಶ. ಅದಕ್ಕಾಗಿಯೆ ಎಲ್ಲ ಕಾರ್ಯಗಳಲ್ಲಿಯೂ ಮೊದಲಿಗೆ ಅವನಿಗೆ ಅಗ್ರ ಪೂಜೆ ಸಲ್ಲುತ್ತದೆ. ದೈವತ್ವವನ್ನು ಪಾಲಿಸುವವನು, ಪಿತೃ ವಾಕ್ಯ ಪರಿಪಾಲನೆ ಮಾಡುವವನು, ಮನೋನಿಗ್ರಹ ಮಾಡುವನನ್ನು ಬ್ರಹ್ಮಚಾರಿ ಎಂದು ಕರೆಯಲಾಗುತ್ತದೆ. ಹನುಮಾನ ಚಾಲಿಸಾ ಪಠಣದಲ್ಲಿ ಅದ್ಭುತ ಶಕ್ತಿಯಿದೆ. ಈ ಚಾಲಿಸಾವನ್ನು ಪಠಣೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಜನ್ಮ ಸಾರ್ಥಕತೆಗೆ ಹನುಮಾನ ಚಾಲಿಸಾ ಸಹಕಾರಿಯಾಗಿದೆ. ತುಲಸೀದಾಸರು ರಚಿಸಿದ ಈ ಚಾಲಿಸಾ ಪಠಣೆಯಿಂದ ಜನ್ಮ ಜನಾಂತರದ ಪಾಪಗಳು ನಾಶವಾಗಿ ಸದ್ಗತಿಗೆ ದಾರಿಯಾಗುತ್ತದೆ. ಹನುಮಂತನು ಶ್ರೀರಾಮನ ಅನುಗ್ರಹದಿಂದ ದೈವತ್ವವನ್ನು ಪಡೆದನು. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ಹನುಮಾನ ಚಾಲಿಸಾ ಪಠಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಜಿ.ಕೆ. ಕಾಳೆ ಅಧ್ಯಕ್ಷತೆ ವಹಿಸಿದ್ದರು. ವೇ. ಮೂ. ಶ್ರೀವಲ್ಲಭಭಟ್ಟ ಸದರಜೋಷಿ ನೇತೃತ್ವ ವಹಿಸಿದ್ದರು. ಶ್ರೀವಲ್ಲಭ ಕುರಂದ್ವಾಡ ದಂಪತಿಯ ಯಜಮಾನತ್ವದಲ್ಲಿ, ಭುಜಂಗಶರ್ಮಾ ಜೋಷಿಯವರ ಸಮ್ಮುಖದಲ್ಲಿ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು. ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ. ಎಸ್.ಎಚ್. ಜೋಶಿ, ಆರ್.ವಿ. ಕುಲಕರ್ಣಿ, ಆನಂದ ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ರಂಗಣ್ಣ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಅವಧೂತ ಕುರಂದ್ವಾಡ, ಎ.ಜಿ. ಕುಲಕರ್ಣಿ, ಡಾ. ಕೃಷ್ಣ ಕಾಳೆ, ಇತರರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಘುನಾಥ ಕೊಂಡಿ ಸ್ವಾಗತಿಸಿದರು. ಆದರ್ಶ ಕುಲಕರ್ಣಿ ನಿರೂಪಿಸಿದರು. ಮಂಜುನಾಥ ಗ್ರಾಮಪುರೋಹಿತ ವಂದಿಸಿದರು.