

ಜಮಖಂಡಿ: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶಿಕ್ಷಣ ಅವಶ್ಯ ಎಂದು ರಾಯಚೂರು ಡಿವೈಎಸ್ಪಿ ಶಾಂತವೀರ ಈ. ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ 10 ವಿದ್ಯಾರ್ಥಿಗಳಿಗೆ ನಗರದ ಅನ್ನಪೂರ್ಣೇಶ್ವರಿ ಹೊಟೇಲ್ ಸಭಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರೊಂದಿಗೆ ಪಾಲಕರ ಸಹಕಾರ ಅಗತ್ಯ ಎಂದರು.
ಈ ಬಾರಿ ನಮ್ಮ ತಾಲೂಕಿನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುತ್ತಾರೆ ಎಂಬ ಆಶಯವಿತ್ತು. ಆದರೂ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು 623 ಅಂಕ ಪಡೆದು ಬಾಗಲಕೋಟೆ ಜಿಲ್ಲೆಗೆ ಜಮಖಂಡಿ ತಾಲೂಕು ಪ್ರಥಮ ಬಂದಿರುವುದು ಸಂತಸದ ಸಂಗತಿ ಎಂದರು.
ಶಾಲೆಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಪ್ರಾಮುಖ್ಯ ನೀಡಿದರೆ ಉತ್ತಮ ಲಿತಾಂಶ ಪಡೆಯಲು ಸಹಕಾರಿಯಾಗಲಿದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಮಕ್ಕಳಲ್ಲಿ ಬೆಳೆಯಬೇಕಾದರೆ ಮನೆಯ ಪರಿಸರ ಹಾಗೂ ಶಾಲೆ ಪರಿಸರ ಅತಿ ಮುಖ್ಯವಾಗಿದೆ. ದಿಟ್ಟ ಹೆಜ್ಜೆಯೇ ಮುಂದಿನ ಸಾಧನೆಗೆ ಮೆಟ್ಟಿಲು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಡಲ್ ಅಧಿಕಾರಿ ಸಂಗಮೇಶ ಬಿಜಾಪೂರ ಮಾತನಾಡಿ, ಶಾಂತವೀರ ಈ. ಅವರು ಮೊದಲು ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಕೆಪಿಎಸ್‌ಸಿ ಪರೀಕ್ಷೆ ಮೂಲಕ ಪೊಲೀಸ್ ಇಲಾಖೆಗೆ ಸೇರಿದ ಅವರು ಈಗ ಪೊಲೀಸ್ ಉಪಾಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸುತ್ತಿರುವ ಕಾರ್ಯ ಮೆಚ್ಚುವಂತದ್ದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಟಾಪ್-10 ವಿದ್ಯಾರ್ಥಿಗಳಾದ ಲಕ್ಷ್ಮೀ ಹೆರಕಲ್(623), ಸಿಂಚನಾ ಪರೂತಿ (623), ಅನನ್ಯಾ ನಂದ್ಯಾಳ (622), ನಿರ್ಮಲಾ ಸಂತಿ (622), ಸಹನಾ ತಿಪರಡ್ಡಿ (622), ಭಾಗ್ಯಶ್ರೀ ಪಾಟೀಲ (622), ಪ್ರೀತಿ ಭಾವಿಕಟ್ಟಿ (621), ಸಹನಾ ಗಲಗಲಿ (621), ವರ್ಷಾ ಸೋಮಣ್ಣವರ (621), ಶ್ರಾವಣಿ ಶಿರೂರ (621) ಅವರನ್ನು ಗೌರವಿಸಲಾಯಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲುಕು ಅಧ್ಯಕ್ಷ ನರಸಿಂಹ ಕಲ್ಲೊಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಕಡಕೋಳ, ಡಾ. ಈಶ್ವರ ಕಣಬೂರ, ಶಿವು ಯಾದವಾಡ, ಜಗದೀಶ ಮೇತ್ರಿ, ಮಹಾದೇವ ಕುಂಚನೂರ, ಶೇಖರ ಪಾಟೀಲ, ನರಸಿಂಹ ಕಲ್ಲಪ್ಪನವರ, ಸಿದ್ದು ಕುಂಚನೂರ, ಗುರುಲಿಂಗ ಕೊಕ್ಕನವರ, ಸಂಗಮೇಶ ಉಟಗಿ ಇತರರು ಇದ್ದರು. ಶಿಕ್ಷಕ ಸಿ.ಕೆ. ಹೊಸೂರ ನಿರೂಪಿಸಿ ವಂದಿಸಿದರು.