ಎಕ್ಸಲೆಂಟ್ ಕಾಲೇಜೀನಲ್ಲಿ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

UDP-15-1-Excelent
ಕುಂದಾಪುರದ ಎಕ್ಸಲೆಂಟ್​ ಪ.ಪೂ. ಕಾಲೇಜೀನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಪಾಲಕ-ಶಿಕ್ಷಕರ ಸಭೆಯನ್ನು ಎಂ.ಮಹೇಶ್​ ಹೆಗ್ಡೆ ಉದ್ಘಾಟಿಸಿದರು. ಪ್ರಾಂಶುಪಾಲ ನಾಗರಾಜ್​ ಶೆಟ್ಟಿ, ಉಪನ್ಯಾಸಕ ಶ್ರೀನಿವಾಸ ವೈದ್ಯ ಹಾಗೂ ಉಪನ್ಯಾಸಕಿಯರು ಇದ್ದರು.
Published on

ಎಂ.ಮಹೇಶ್​ ಹೆಗ್ಡೆ ಭರವಸೆ | ಕುಂದಾಪುರ ಕಾಲೇಜಿನಲ್ಲಿ ಪಾಲಕ-ಶಿಕ್ಷಕರ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದ ಸರ್ಕಾರಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕಗಳಿಸಿದ ಪ್ರಥಮ 50 ವಿದ್ಯಾರ್ಥಿಗಳಿಗೆ ಕುಂದಾಪುರದ ಎಂ.ಎಂ. ಹೆಗ್ಡೆ ಎಜುಕೇಶನಲ್​ ಚಾರಿಟೇಬಲ್​ ಟ್ರಸ್ಟ್​ನ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದು ಎಂದು ಟ್ರಸ್ಟ್​ನ ಅಧ್ಯಕ್ಷ ಎಂ.ಮಹೇಶ್​ ಹೆಗ್ಡೆ ಭರವಸೆ ನೀಡಿದರು.

ಕುಂದಾಪುರದ ಎಕ್ಸಲೆಂಟ್​ ಪ.ಪೂ. ಕಾಲೇಜೀನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024--25ನೇ ಸಾಲಿನ ಶೈಕ್ಷಣಿಕ ವರ್ಷದ ಪಾಲಕ-ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ

ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆ ಹುಟ್ಟು ಹಾಕುವುದರ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪೋಷಿಸಿ, ಬೆಳೆಸಲು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಟ್ರಸ್ಟ್​ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಟ್ರಸ್ಟ್​ನ ವತಿಯಿಂದ ಉಚಿತ ಶಿಕ್ಷಣ ಹಾಗೂ ಶುಲ್ಕ ರಿಯಾಯಿತಿ ನೀಡುವ ಮೂಲಕ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಆಸರೆಯಾಗುವುದಾಗಿ ತಿಳಿಸಿದರು.

ಕಾಲೇಜಿನ ವಿಶೇಷತೆಗಳ ಮಾಹಿತಿ

ಕಾಲೇಜಿನ ಪ್ರಾಂಶುಪಾಲ ನಾಗರಾಜ್​ ಶೆಟ್ಟಿ ಮಾತನಾಡಿ, ಪ್ರಸಕ್ತ ವರ್ಷದ ಶೈಕ್ಷಣಿಕ ಕಾರ್ಯವೈಖರಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದರು. ಪರೀಕ್ಷಾ ಫಲಿತಾಂಶ, ಪರೀಕ್ಷಾ ವಿಧಾನ, ಸಿಬ್ಬಂದಿ ವರ್ಗ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ವಸತಿ ನಿಲಯದ ವೈಶಿಷ್ಟ್ಯತೆ, ಆಟೋಟ ಸ್ಪರ್ಧೆಗಳು, ಧಾರ್ಮಿಕ ಹಬ್ಬಗಳ ಆಚರಣೆ ಮತ್ತು ಸಂಸ್ಥಯ ಇನ್ನಿತರ ವಿಶೇಷತೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

4 ದಿನ ನಡೆದ ಸಭೆ

ಪಾಲಕ-ಶಿಕ್ಷಕರ ಸಭೆಯು ನಾಲ್ಕು ದಿನ, ನಾಲ್ಕು ಹಂತಗಳಲ್ಲಿ ಜರುಗಿತು. ವಿಜ್ಞಾನ ವಿಭಾಗದ ವಸತಿ ನಿಲಯ ಹಾಗೂ ಡೇ-ಬೋರ್ಡರ್​ಗಳ ಮತ್ತು ವಾಣಿಜ್ಯ ವಿಭಾಗದ ವಸತಿ ನಿಲಯ ಹಾಗೂ ಡೇ-ಬೋರ್ಡರ್​ ವಿದ್ಯಾರ್ಥಿಗಳ ಪಾಲಕ-ಶಿಕ್ಷಕರ ಸಭೆಯನ್ನು ಪ್ರತ್ಯೇಕವಾಗಿ ಬೇರೆ ಬೇರೆ ದಿನಾಂಕಗಳಂದು ನಡೆಸಲಾಯಿತು.

ಸಭೆಯಲ್ಲಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಉಪನ್ಯಾಸಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ

ಎಕ್ಸಲೆಂಟ್​ ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿವೆ. ಎರಡೂ ವಿಭಾಗದ ಎಲ್ಲ ವಿಷಯ ಮುಖ್ಯಸ್ಥರು ಶೈಕ್ಷಣಿಕ ವರ್ಷದ ಪಠ್ಯ ಪ್ರವಚನಗಳ ಯೋಜನೆ ಮತ್ತು ಯೋಚನೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ಕ್ಲಪ್ತ ಸಮಯದಲ್ಲಿ ಯೋಜಿತ ಪಠ್ಯಗಳನ್ನು ಮುಗಿಸಿ, ವಿದ್ಯಾರ್ಥಿ ಕೇಂದ್ರೀಕೃತವಾಗಿ ತರಗತಿ ಹಾಗೂ ತರಬೇತಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಪಾಲಕರಿಗೆ ಪ್ರಾಂಶುಪಾಲ ನಾಗರಾಜ್​ ಶೆಟ್ಟಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net