

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮಗೆ ಎದುರಾಗುವ ಸ್ಪರ್ಧೆಯನ್ನು ಎದುರಿಸುವುದಕ್ಕಾಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ತಯಾರಿಗೊಳಿಸಬೇಕಿದೆ. ಜತೆಗೆ ವಿದ್ಯಾರ್ಥಿಗಳಿಗೆ ಬೇಕಾದ ತರಬೇತಿ ನೀಡಿ ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುಬೇಕು ಎಂದು ಕಾಲೇಜಿನ ಟ್ರಸ್ಟಿ, ಪ್ರಾಂಶುಪಾಲ ಡಾ.ಎಸ್.ಎನ್ ವೆಂಕಟೇಶ್ ನಾಯಕ್ ಹೇಳಿದರು.
ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪಾಲಕರ ಶಿಕ್ಷಕ-ರಕ್ಷಕ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ. ವೈಬ್ರೆಂಟ್ ಸಂಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ ಎಂದರು.
ಟ್ರಸ್ಟಿ ಶರತ್ ಗೋರೆ ಮಾತನಾಡಿ, ಪಾಲಕರು ವಿದ್ಯಾರ್ಥಿಗಳಿಗೆ ಒತ್ತಡ ಹೇರದೆ ಪ್ರೀತಿ ಮತ್ತು ಕಾಳಜಿಯಿಂದ ವರ್ತಿಸಿ ಆತ್ಮವಿಶ್ವಾಸ ತುಂಬಬೇಕು.ಮಕ್ಕಳು ಕಠಿಣ ಶ್ರಮದಿಂದ ಉತ್ತಮ ಅಂಕ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಟ್ರಸ್ಟಿ ಚಂದ್ರಶೇಖರ್ ರಾಜೆ ಅರಸ್ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕಿದ್ದು, ಛಲ ಬಿಡದೆ ಅಧ್ಯಯನದಲ್ಲಿ ತೊಡಗಿದರೆ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರೊಂದಿಗೆ ಪಾಲಕರ ಸಹಕಾರವೂ ಬಹಳ ಮುಖ್ಯ ಎಂದರು.
ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್, ಸುಭಾಷ್ ಝಾ ಹಾಗೂ ಪಾಲಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ನಿರೂಪಿಸಿದರು.