ಮಳೆಗಾಗಿ ಪರವು ಪೂಜೆ, ಎತ್ತಿನ ಮೆರವಣಿಗೆ

12 LXR
Published on

ಲಕ್ಷ್ಮೇಶ್ವರ: ಪಟ್ಟಣದ ಸೊಪ್ಪಿನಕೇರಿ ಓಣಿಯ ರೈತರು ಮಳೆಗಾಗಿ ಪ್ರಾರ್ಥಿಸಿ ಶ್ರೀ ಕೊಲ್ಲಾರೆಮ್ಮ ದೇವಿಗೆ ವಿಶೇಷ ಪೂಜೆ, ಎತ್ತಿನ ಮೆರವಣಿಗೆ ಹಾಗೂ ಪೂರ್ಣಕುಂಭ ಮೆರವಣಿಗೆ ಕೈಗೊಂಡು ಪರವು ಸಂಪ್ರದಾಯ ಆಚರಿಸಿದರು.
ಈ ವಿಶೇಷ ಪರವು ಸಂಪ್ರದಾಯದ ಆಚರಣೆಗಾಗಿ ಓಣಿಯ ಹಿರಿಯರು, ಯುವಕರು ಜಂತ್ಲಿ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಗೋಧಿ ಹುಗ್ಗಿ, ಜೋಳದ ಕಿಚಡಿ, ಅನ್ನ-ಸಾರು ಪ್ರಸಾದ ಸಿದ್ಧ್ದಪಡಿಸುತ್ತಾರೆ. ಬೆಳಗ್ಗೆ ಅಲಂಕೃತ ಎತ್ತಿನ ಬಂಡಿ, ಟ್ರಾೃಕ್ಟರ್‌ಗಳಲ್ಲಿ ಸಿದ್ಧಪಡಿಸಿದ ಪ್ರಸಾದವನ್ನಿರಿಸಿ ಡೊಳ್ಳು, ಭಜನೆ, ಪೂರ್ಣಕುಂಭ, ಎತ್ತುಗಳ ಮೆರವಣಿಗೆ ಮೂಲಕ ಭಜನೆ ಮಾಡುತ್ತಾ ಅಡರಕಟ್ಟಿ ಹತ್ತಿರದ ಕೊಲ್ಲಾರೆಮ್ಮನ ಪೌಳಿಗೆ ತೆರಳುತ್ತಾರೆ. ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಿ ಮಳೆಯ ಭವಿಷ್ಯ ನುಡಿಯುತ್ತಾಳೆ. ನಂತರ ಲಕ್ಷ್ಮೇಶ್ವರ, ಮಂಜಲಾಪುರ, ಅಡರಕಟ್ಟಿ ಸುತ್ತ್ತಲಿನ ಭಾಗದ ರೈತರು ಸಾವಿರಾರು ಜನರಿಗೆ ಪ್ರಸಾದ ಉಣಬಡಿಸಿದರು. ಸಂಜೆ ಸೂರಣಗಿಯ ಡೊಳ್ಳು ಮೇಳದೊಂದಿಗೆ ಪಟಾಕಿ ಸಿಡಿಸಿ ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಿಜೃಂಭಣೆಯಿಂದ ಎತ್ತುಗಳ ಮೆರವಣಿಗೆ ಜರುಗಿತು. ಓಣಿಯ ಹಿರಿಯರು, ಮಹಿಳೆಯರು, ಯುವಕರು ಸೇರಿ ರೈತ ಸಮುದಾಯದವರೆಲ್ಲ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net