

ಶಿವಮೊಗ್ಗ: ಶಿವಮೊಗ್ಗ ಹಾಗೂ ಚಿತ್ರದುರ್ಗ ಮೂಲದ ಉತ್ಸಾಹಿ ಯುವಕರ ತಂಡ ನಿರ್ಮಿಸಿ, ನಿರ್ದೇಶಿಸಿದ ಪಾರಿತೋಷಕ ಸಿನಿಮಾ ಮಾ.14ರಂದು ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಪ್ರದೀಪ್ ಹೇಳಿದರು.
ವಾಮಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ. ಕಷ್ಟಪಟ್ಟು ಗಳಿಸಿದ್ದೇ ಶಾಶ್ವತ ಎನ್ನುವ ಪರಿಕಲ್ಪನೆಯೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಕಥೆಗೆ ತಕ್ಕಂತೆ ಬಂಡವಾಳ ಹೂಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಟುಂಬ ಸಮೇತ ನೋಡಬಹುದಾದ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು ರಾತ್ರಿಯೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದೇವೆ. ಚಿತ್ರದ ಶೀರ್ಷಿಕೆ ಬಗೆಗಿನ ಕುತೂಹಲಕ್ಕೆ ಸ್ಪಷ್ಟನೆ ನೀಡಿದ ಅವರು, ಚಿತ್ರದುರ್ಗದ ಕೋಟೆಯನ್ನು ಒಂದು ಪಾರಿತೋಷಕವಾಗಿ ಕೊಡುಗೆ ನೀಡುವ ಕಲ್ಪನೆಯನ್ನು ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಶಿವಮೊಗ್ಗ ಮೂಲದ ಶ್ರೀನಿಧಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸಬರು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ಹೊಸಬರನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ನಾಯಕ ಮನು ಮಾತನಾಡಿ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಹಂಬಲದೊಂದಿಗೆ ಬೆಂಗಳೂರಿಗೆ ಹೋಗಿ ಅಲ್ಲಿ ನೆಲೆ ಕಾಣದೆ ವಾಪಸ್ ಬಂದು ಈ ಸಿನಿಮಾ ಮಾಡಿದ್ದೇವೆ. ಬೆಂಗಳೂರು ಸಮುದ್ರ ಇದ್ದಂತೆ. ಅಲ್ಲಿದ್ದು ಸಿನಿಮಾದಲ್ಲಿ ಗುರುತಿಸಿಕೊಳ್ಳುವುದು ಕಷ್ಟ. ನಮಗೆ ಅವಕಾಶ ಸಿಗಲಿಲ್ಲ. ಹಾಗಾಗಿ ವಾಪಸ್ ಬಂದು ನಾವೇ ಸಿನಿಮಾ ಮಾಡಿದ್ದೇವೆ ಎಂದರು. ಸ್ಟೈಲ್ಸ್ ಡಾನ್ಸ್ ಸಂಸ್ಥೆಯ ಶಶಿಕುಮಾರ್, ಕಲಾವಿದ ಹೇಮಂತ್ ಸುದ್ದಿಗೋಷ್ಠಿಯಲ್ಲಿದ್ದರು.