ಜಾಜೂರು ಗ್ರಾಮ ಕೆಂಪು ವಲಯ

P PURA KARONA 17 (2)
Published on

ಪರಶುರಾಮಪುರ: ಕರೊನಾ ಪಾಸಿಟಿವ್ ಕೇಸ್ ದಾಖಲಿರುವ ಆಂಧ್ರದ ಅನಂತಪುರ ಆಸ್ಪತ್ರೆಗೆ ತೆರಳಿದ್ದ ಪರಶುರಾಮಪುರ ಹೋಬಳಿಯ ಜಾಜೂರು ನಿವಾಸಿಯೊಬ್ಬರ ಕುಟುಂಬವನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಯ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.

ಈತ ಆಂಧ್ರದ ಗಂಟಾಯಿನಹಟ್ಟಿಯಲ್ಲಿ ವಿವಾಹವಾಗಿದ್ದು, ತನ್ನ ಅತ್ತೆ-ಮಡದಿಯೊಂದಿಗೆ ಅನಂತಪುರದ ಆಸ್ಪತ್ರೆಗೆ ಹೋಗಿ ಅಲ್ಲಿಂದ ನೇರ ಸ್ವಗ್ರಾಮ ಜಾಜೂರಿಗೆ ಬಂದಿದ್ದರು.

ಈ ಮಾಹಿತಿ ತಿಳಿದ ತಾಲೂಕು ಆಡಳಿತ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಅವರ ಮನೆಗೆ ಕಳುಹಿಸಿ ಆತ ಹಾಗೂ ಕುಟುಂಬದ ಒಟ್ಟು ಆರು ಮಂದಿಯನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಕರೆತಂದು ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಿದೆ.

ಆಂಧ್ರಪ್ರದೇಶದ ವರದಿ: ಆಂಧ್ರದ ಶೆಟ್ಟೂರು ಮಂಡಲ ವ್ಯಾಪ್ತಿಯಲ್ಲಿ ಕರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದ ಕೂಗಳತೆ ದೂರದ ಗಂಟಾಯಿನಹಟ್ಟಿಗೆ ಶುಕ್ರವಾರ ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಸಾರ್ವಜನಿಕರಿಗೆ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದ್ದಾರೆ.

ಗ್ರಾಮದಿಂದ ಯಾರೊಬ್ಬರೂ ಹೊರ ಹೋಗದಂತೆ ಹಾಗೂ ಗ್ರಾಮವನ್ನು ಪ್ರವೇಶ ಮಾಡದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ವತಿಯಿಂದ ಗ್ರಾಮದ ಸುತ್ತಲೂ ಟ್ರಂಚ್ ಮಾಡುವ ಕಾರ್ಯ ನಡೆಯುತ್ತಿದೆ. ಈ ಗ್ರಾಮವನ್ನು ಕೆಂಪು ವಲಯ ಎಂದು ಜಿಲ್ಲಾಡಳಿತ ಘೋಷಿಸಿರುವ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ.

ಮನೆ ಬಿಟ್ಟು ಹೊರಬರುವಂತಿಲ್ಲ: ಜಾಜೂರಿನ ಆರು ಮಂದಿಯನ್ನು ಗುರುವಾರ ರಾತ್ರಿ ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಿದ ಹಿನ್ನೆಲೆಯಲ್ಲಿ ಗ್ರಾಮವನ್ನು ಕೆಂಪು ವಲಯ ಪ್ರದೇಶವೆಂದು ಘೋಷಿಸಿರುವ ಜಿಲ್ಲಾಡಳಿತ, ಅಲ್ಲಿನ ಬ್ಯಾಂಕ್ ಇನ್ನಿತರ ಎಲ್ಲ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮನೆ ಬಿಟ್ಟು ಯಾರೂ ಹೊರಬರದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆಂಧ್ರ-ಕರ್ನಾಟಕ ಗಡಿಯ ಜಾಜೂರು ಸುತ್ತಲಿನ ಪರಶುರಾಮಪುರ, ಚಳ್ಳಕೆರೆ, ತಿಪ್ಪನಹಳ್ಳಿ, ಓಬಳಾಪುರ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿ, ಚೆಕ್‌ಪೋಸ್ಟ್ ಸಿಬ್ಬಂದಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net