

ಪರಶುರಾಮಪುರ: ಭದ್ರಾ ಮೇಲ್ದಂಡೆ ಸೇರಿ ವಿವಿಧ ನೀರಾವರಿ ಯೋಜನೆಗಳಡಿ ಜಿಲ್ಲೆಗೆ ನೀರು ಹರಿಸುವಂತೆ ಎರಡು ದಶಕಗಳಿಂದ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ವರ್ಗ, ಸಂಘಟನೆ ಜನ ಹೋರಾಟ ನಡೆಸಿ, ಸರ್ಕಾರದ ಗಮನ ಸೆಳೆದಿವೆ ಎಂದಯ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿನ ಕೋಟೆಕೆರೆ ಬಳಿಯ ನೂತನ ಬ್ಯಾರೇಜ್‌ಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಅನಾವೃಷ್ಟಿಯಾಗಿ ಜನ, ಜಾನುವಾರುಗಳಿಗೆ ಕುಡಿವ ನೀರಿಗೂ ತತ್ವಾರ ಉಂಟಾಗಿತ್ತು. ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಿದ್ದು, ವಿವಿಧ ಹಳ್ಳಿಗಳಿಗೆ ಅನುಕೂಲವಾಗಿದೆ. ಆ ಕೀರ್ತಿ ಶಾಸಕ ರಘುಮೂರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬಯಲು ಸೀಮೆಯ ಜನರಿಗೆ ಸಂವಿಧಾನದ ಆಶಯದಂತೆ ಸರ್ಕಾರ ನೀರು ಒದಗಿಸಿದೆ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇರಬೇಕು. ಜನರ ಜತೆ ಒಡನಾಟವಿಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ, ತಾಪಂ ಸದಸ್ಯ ಸಮರ್ಥರಾಯ, ಜಿಪಂ ಮಾಜಿ ಸದಸ್ಯ ಆರ್.ರಂಗಸ್ವಾಮಿ, ಜಿಪಂ ಕೆಡಿಪಿ ಸದಸ್ಯ ಜಯವೀರಾಚಾರಿ, ಜಯಕುಮಾರ, ಚೌಳೂರು ಪ್ರಕಾಶ, ಗ್ರಾಪಂ ಸದಸ್ಯ ಪ್ರಸನ್ನಕುಮಾರ ಮಾತನಾಡಿದರು.
ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷ ಜಿ.ವೀರೇಶ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಕಾಟಯ್ಯ, ಕೃಷ್ಣಪ್ಪ, ಗೋವಿಂದಪ್ಪ, ಯಶೋದಾ ಇದ್ದರು.