ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬಿತ್ತಿ

P PURA ARIIVUU 12 (3)
Published on

ಪರಶುರಾಮಪುರ: ಚಿಕ್ಕಂದಿನಲ್ಲೇ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ರೂಢಿಸಿದರೆ ಮೂಢನಂಬಿಕೆ, ಕಂದಾಚಾರಗಳಿಗೆ ಅವರು ಬಲಿ ಆಗುವುದಿಲ್ಲ ಎಂದು ವಿಜ್ಞಾನ ಶಿಕ್ಷಕ ನಾಗಗೊಂಡನಹಳ್ಳಿ ನಾಗರಾಜು ತಿಳಿಸಿದರು.

ಗ್ರಾಮದ ಕಲ್ಯಾಣದುರ್ಗ ರಸ್ತೆಯ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಸರ್ ಸಿ.ವಿ.ರಾಮನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಹಾಗೂ ಪವಾಡಗಳ ಗುಟ್ಟು ಬಯಲು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಆಧುನಿಕ ಕಾಲಘಟ್ಟದ ಮಕ್ಕಳು ಯಾವುದೇ ಕಾರಣಕ್ಕೂ ಸಾಂಪ್ರದಾಯಿಕ ಬೋಧನೆ ಇಷ್ಟಪಡುವುದಿಲ್ಲ. ಬದಲಿಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಮಾರ್ಗದರ್ಶನ ನೀಡಿದರೆ ಮಾತ್ರ ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು ಜತೆಗೂಡಿ ಸಾಗಬೇಕು ಎಂದರು.

ವಿಶ್ವಭಾರತಿ ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ ಪ್ರಾಸ್ತಾವಿಕ ಮಾತನಾಡಿ, ಪ್ರಾಥಮಿಕ-ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಸೃಷ್ಟಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿಜ್ಞಾನಿಗಳ ಭಾವಚಿತ್ರಗಳನ್ನು ಪೂಜಿಸಿ, ಅವರ ತತ್ವ ಸಿದ್ಧಾಂತಗಳನ್ನು ತಿಳಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಚಳ್ಳಕೆರೆಯ ಸೌರಶಕ್ತಿ ಕೇಂದ್ರ, ವಿಜ್ಞಾನ ಶಿಕ್ಷಕರ ಸಂಘದಿಂದ ಆಯೋಜಿಸಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ, ಮುಖ್ಯಶಿಕ್ಷಕರಾದ ಹನುಮಂತಪ್ಪ, ರೇಖಾ, ಬಿ.ಲೋಕೇಶ, ಶಿಕ್ಷಕರಾದ ವಿ.ತಿಪ್ಪೇಸ್ವಾಮಿ, ನವೀನಾ, ಡಿ.ಹನುಮಂತರಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net