ಸರ್ಕಾರಿ ಶಾಲೆಗಳ ಪ್ರಗತಿ ಸರ್ವರ ಹೊಣೆ

P PURA DATHUU 13 (2)
Published on

ಪರಶುರಾಮಪುರ: ಗ್ರಾಮದ ಕೆಪಿಎಸ್‌ನ ಬಾಲಕಿಯರ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ, ಪಿ.ಓಬನಹಳ್ಳಿ ಹಾಗೂ ಚಿತ್ರನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಬೆಂಗಳೂರಿನ ಕಿಚ್ಚ ಸುದೀಪ ಚಾರಿಟಬಲ್ ಟ್ರಸ್ಟ್ ಶುಕ್ರವಾರ ದತ್ತು ಪಡೆಯಿತು.

ಟ್ರಸ್ಟ್‌ನ ಆರ್.ಕೆ.ಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದರು.

ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸರ್ಕಾರ ಅಗತ್ಯ ಹಣಕಾಸಿನ ನೆರವು, ಪ್ರೋತ್ಸಾಹಕ ಸಾಮಗ್ರಿಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಚೆಗೆ ಸರ್ಕಾರಿ ಶಾಲೆಗೆ ದಾಖಲಾಗುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ಸಂಸ್ಥೆ ಚಳ್ಳಕೆರೆ ತಾಲೂಕಿನ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಮೂಡಲಗಿರಿಯಪ್ಪ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ಈಗಾಗಲೇ ಸರ್ಕಾರ ಕೆಪಿಎಸ್ ಶಾಲೆ ಆರಂಭಿಸಿ 1ರಿಂದ ಪಿಯುಸಿ ವರೆಗಿನ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿಯಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಟ್ರಸ್ಟ್ ಮುಂದೆ ಬಂದಿರುವುದು ಮಾದರಿ ಕಾಯ ಎಂದರು.

ಟ್ರಸ್ಟ್‌ನ ನಿಯಮಾವಳಿಗಳ ಪತ್ರವನ್ನು ಮುಖ್ಯಶಿಕ್ಷಕರಿಗೆ ಪದಾಧಿಕಾರಿಗಳು ವಿತರಿಸಿದರು. ಎಸ್.ಆರ್.ರಂಗಸ್ವಾಮಿ, ಮಂಜುನಾಥ, ಶಾಲಾ ಸಮಿತಿ ಸದಸ್ಯ ಹೂವಿನ ಕುಮಾರ, ರಮೇಶ, ರಮೇಶರೆಡ್ಡಿ, ಪ್ರವಿಣ್, ಸಿಆರ್‌ಪಿ ರವಿಶಂಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net