

ಪರಶುರಾಮಪುರ: ಗ್ರಾಮೀಣ ಭಾಗದ ಜನರಿಗೆ ಅಗತ್ಯ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದಿನ ಬೆಳಗಾದರೆ ಅಗತ್ಯ ವಸ್ತುಗಳಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಮಾರುಕಟ್ಟೆಗಳಲ್ಲಿ ದುಪ್ಪಟ್ಟು ದರವನ್ನು ನೀಡಿ ತರಕಾರಿ, ಹಾಲು, ಹಣ್ಣು ದಿನಸಿಕೊಳ್ಳುವ ಸ್ಥಿತಿ ಬಂದೊದಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೈತರು ಬೆಳೆದ ಧವಸ-ಧಾನ್ಯಗಳು, ಈರುಳ್ಳಿ, ತರಕಾರಿಗಳನ್ನು ಕೊಂಡುಕೊಳ್ಳುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನವಸತಿ ಪ್ರದೇಶಗಳಿಗೆ ಸರ್ಕಾರವೇ ಹಾಲು, ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಪೂರೈಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅನೇಕರಿಗೆ ಹಲವು ರೀತಿಯ ಸಮಸ್ಯೆಗಳು ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ರೈತರಾದ ವೀರಣ್ಣ, ಸುಶೀಲಮ್ಮ, ಚಿತ್ರಲಿಂಗಪ್ಪ, ಚಿತ್ತಪ್ಪ, ತಿಮ್ಮಣ್ಣ, ಸಿರಿಯಣ್ಣ, ದಯಾನಂದಮೂರ್ತಿ, ನಾಗರಾಜು, ರಾಜು, ರುದ್ರಣ್ಣ, ಪ್ರೇಮಕುಮಾರ, ಮಧುಸೂದನ ತಿಳಿಸಿದ್ದಾರೆ.