

ಪರಶುರಾಮಪುರ: ಗ್ರಾಮ ನೈರ್ಮಲ್ಯ, ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ಸ್ವಚ್ಛತೆಯಿಂದ ಕರೊನಾ ವೈರಸ್ ಹರಡುವಿಕೆ ತಡೆಯಬಹುದಾಗಿದೆ ಎಂದು ಚಳ್ಳಕೆರೆ ಅಗ್ನಿ ಶಾಮಕಠಾಣಾಧಿಕಾರಿ ಬಿ.ಜಯಣ್ಣ ತಿಳಿಸಿದರು.
ಗ್ರಾಮದ ವಿವಿಧ ಜನವಸತಿ ಪ್ರದೇಶಗಳಲ್ಲಿ ತಾಲೂಕು ಹಾಗೂ ಸ್ಥಳೀಯ ಆಡಳಿತ, ಅಗ್ನಿಶಾಮಕ ಠಾಣೆ ವತಿಯಿಂದ ಗುರುವಾರ ಕರೊನಾ ವೈರಸ್ ಹರಡುವಿಕೆ ತಡೆಗೆ ಹೈಡ್ರೋಕ್ಲೋರೈಡ್, ಬ್ಲೀಚಿಂಗ್‌ಪೌಡರ್ ಹಾಗೂ ಫಿನಾಯಿಲ್ ಮಿಶ್ರಣ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.
ಸಾಮೂಹಿಕವಾಗಿ ಹರಡುವ ಕರೊನಾ ತಡೆಗೆ ಕ್ರಿಮಿನಾಶಕ ಸಿಂಪಡಣೆ ಅನಿವಾರ್ಯವಾಗಿದೆ. ಆದಷ್ಟು ಜನರು ಸಾಮಾಜಿಕ ಅಂತರ, ವೈಯಕ್ತಿಯ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.
ಪಿಡಿಒ ಜಿ.ನಾಗರಾಜು ಮಾತನಾಡಿ, ಜಿಲ್ಲೆ, ತಾಲೂಕು ಹಾಗೂ ಸ್ಥಳೀಯ ಆಡಳಿತದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮದ ಬೈಪಾಸ್ ರಸ್ತೆ, ಬಸ್ ನಿಲ್ದಾಣ, ಸಂತೆ ಮೈದಾನ, ಆಸ್ಪತ್ರೆ, ಪೊಲೀಸ್ ಠಾಣೆ, ಬೆಸ್ಕಾಂ, ಕೃಷಿ ಇಲಾಖೆ ಆವರಣ ಹಾಗೂ ಮುಖ್ಯ ಚರಂತಿಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಯಿತು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಸದಸ್ಯ ಟಿ.ಗೋವಿಂದಪ್ಪ, ಪಿಎಸ್‌ಐ ಮಹೇಶ ಹೊಸಪೇಟೆ, ಪ್ರಮುಖ ಅಗ್ನಿಶಾಮಕ ವಾಯಿದ್, ಅಗ್ನಿಶಾಮಕರಾದ ಜಬೀವುಲ್ಲಾ, ಮಂಜಪ್ಪ, ವಾಹನ ಚಾಲಕ ವಿಶ್ವನಾಥ, ಮುಖಂಡರಾದ ಎಂ.ನಾಗಭೂಷಣ, ವೆಂಕಟೇಶ ಇದ್ದರು.