

ಪರಶುರಾಮಪುರ: ಐತಿಹಾಸಿಕ ಸ್ಮಾರಕ, ದೇವಸ್ಥಾನ, ವೀರಗಲ್ಲು-ಮಾಸ್ತಿಗಲ್ಲುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ ಹೇಳಿದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಗ್ರಾಮದ ಕೋಟೆಕೆರೆಯಲ್ಲಿನ ಐತಿಹಾಸಿಕ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಾತನ ಸ್ಮಾರಕ, ಮಂಟಪ, ದೇವಸ್ಥಾನಗಳ ರಕ್ಷಣೆ, ಶುಚಿತ್ವಕ್ಕಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೆರವಿನಿಂದ ಶ್ರಮದಾನ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಕೆ.ಟಿ.ಮಹಾಂತೇಶ್ ಮಾತನಾಡಿ, ಹೋಬಳಿಯಲ್ಲಿ ವಿಜಯನಗರದ ಅರಸರು, ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಕೋಟೆಕೆರೆ ಹಂಪಯ್ಯನ ಮಠ, ಲಕ್ಷ್ಮೀರಂಗನಾಥಸ್ವಾಮಿ, ಲಕ್ಷ್ಮಿ ಚನ್ನಕೇಶಸ್ವಾಮಿ, ವೀರ ಲಕ್ಕಮ್ಮ, ಅಜ್ಜಯ್ಯನ ದೇವಸ್ಥಾನ, ಹತ್ತಾರು ಕಲ್ಲಿನ ಮಂಟಪಗಳು, ಹಲವು ವೀರಗಲ್ಲು-ಮಾಸ್ತಿಗಲ್ಲುಗಳಿವೆ. ಇವುಗಳ ರಕ್ಷಣೆಗೆ ಪುರಾತತ್ವ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಎನ್‌ಎಸ್‌ಎಸ್ ಘಟಕದ ಸಂಚಾಲಕ ರಂಗನಾಥ, ಪ್ರಾಧ್ಯಾಪಕರಾದ ಮೊಹಮದ್ ಸಾದತ್, ವೀರಭದ್ರಪ್ಪ, ಭರತ್, ಸತೀಶ, ಲಿಂಗೇಶ್ವರ, ಸುನಿಲ್, ರಾಕೇಶ್, ನಾಗಭೂಷಣ, ಶ್ರೀನಿವಾಸ, ಶಿವಕುಮಾರ, ಯಶವಂತ ಮತ್ತಿತರರಿದ್ದರು.