

ಪರಶುರಾಮಪುರ: ಮದ್ಯ ವ್ಯಸನಿಯಾಗಿದ್ದ ಮಗನ ಮೇಲೆ ತಂದೆ ಸಮೀಪದ ಸಿರಿವಾಳ ಓಬಳಾಪುರದಲ್ಲಿ ಶುಕ್ರವಾರ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸದ್ಯ ಪುತ್ರನ ಸ್ಥಿತಿ ಗಂಭೀರವಾಗಿದೆ.
ನರಸಿಂಹನಾಯಕ (26) ಹಲ್ಲೆಗೊಳಗಾದ ವ್ಯಕ್ತಿ. ರಘುನಾಥ ಎಂಬಾತನಿಗೆ ಮೂರು ಮಕ್ಕಳಿದ್ದು, ಮೊದಲನೇ ಮಗ ನರಸಿಂಹನಾಯಕನಿಗೆ ತೀವ್ರ ಕುಡಿತದ ಚಟವಿತ್ತು.
ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರವೂ ಕುಡಿದು ಮನೆಗೆ ಬಂದು ನನಗೆ ಕುಡಿಯಲು ಹಣ ಕೊಡುವಂತೆ ಪೀಡಿಸಿದ್ದು, ಸಿಟ್ಟಿಗೆದ್ದ ತಂದೆ ಮಗನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ರಘುನಾಥನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.