

ಪರಶುರಾಮಪುರ: ವಿಶ್ವವಿದ್ಯಾನಿಲಯಗಳು ದೇಶಕ್ಕೆ ವಿವೇಕಾನಂದರಂತವರನ್ನು ಕೊಡುಗೆ ನೀಡಬೇಕೇ ಹೊರತು ವಿವೇಕಾಂಧರನ್ನಲ್ಲ ಎಂದು ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಿ.ಮಹದೇವಪುರದಲ್ಲಿ ಭಾನುವಾರ ಸರ್ಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮುದಾಯ, ಶಿಕ್ಷಕರು ಮತ್ತು ಪಾಲಕರು ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಬೇಕು. ಯೌವನಾವಸ್ಥೆಯಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಬೇಕು. ನೈತಿಕ ಮಾರ್ಗದಲ್ಲಿ ನಡೆಯುವಂತೆ ನೀತಿ ಶಿಕ್ಷಣ ನೀಡಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ವಿವಿಧ ಹುದ್ದೆಗೇರಿರುವ ಹಳೇ ವಿದ್ಯಾರ್ಥಿಗಳು 4.5 ಲಕ್ಷ ರೂ. ವೆಚ್ಚದಲ್ಲಿ ಸುವರ್ಣ ಮಹೋತ್ಸವ ಭವನ ನಿರ್ಮಿಸಿರುವುದು ಶ್ಲಾಘನಾರ್ಹ. ಶಾಸಕರ ಅನುದಾನದಲ್ಲಿ ಶಾಲಾಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಪ್ರಸ್ತುತ ಗುರು ಹಿರಿಯರಿಗೆ ಗೌರವ ನೀಡುವುದು ಕಡಿಮೆಯಾಗಿದೆ. ಮಾನವೀಯ ಮೌಲ್ಯ ಕಣ್ಮರೆ ಆಗುತ್ತಿದ್ದು, ಸಮಾಜ ತನ್ನ ಪಥ ಬದಲಿಸಿಕೊಳ್ಳುತ್ತಿದೆ. ಈ ವ್ಯವಸ್ಥೆ ಸರಿಪಡಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಉಪನ್ಯಾಸಕ ಆರ್.ಮುರುಗೇಂದ್ರಪ್ಪ, ಹಳೇ ವಿದ್ಯಾರ್ಥಿಗಳಂತೆ ಸಮುದಾಯವೂ ಸಹಕಾರ ನೀಡಿದರೆ ಸರ್ಕಾರದ ಎಲ್ಲ ಶಾಲೆಗಳ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ವೆಂಕಟರಮಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹೇಶ, ತಿಪ್ಪೇಸ್ವಾಮಿ ವಿರಚಿತ ಸುವರ್ಣ ನವಮಿ ಕೃತಿ ಮತ್ತಿತರ ಪುಸ್ತಕಗಳನ್ನು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.
ಗ್ರಾಪಂ ಅಧ್ಯಕ್ಷೆ ಸರೋಜಾ ಸಂಜೆ ನೆರವೇರಿದ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ಎಸ್.ರವಿಕುಮಾರ, ಸಿ.ರಾಜಶೇಖರ, ಸುಧಾಕರ ಇತರರಿದ್ದರು.
ಸುಧಾ ಬರಗೂರು ಇವರಿಂದ ಹಾಸ್ಯ ಸಂಜೆ, ಮಿಸ್ಟರ್ ಬಸವರಾಜ್ ಶಂಕರ್ ಉಮ್ರಾನಿ ಇವರಿಂದ ಮ್ಯಾಥ್ಸ್ ಮ್ಯಾಜಿಕ್, ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ತುಮಕೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಕಲಾ ವೃಂದದವರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಂಡಿತು.