ಕುಡಿವ ನೀರು ಪೂರೈಕೆಗೆ ಪಟ್ಟು

P PURA PRATHIBHATANEE 04
Published on

ಪರಶುರಾಮಪುರ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಸಮೀಪದ ಜುಂಜರಗುಂಟೆ ಗ್ರಾಮಸ್ಥರು ಆರ್‌ಒ ಪ್ಲಾಂಟ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಆರ್‌ಒ ಪ್ಲಾಂಟ್ ಹಾಗೂ ನಲ್ಲಿಗಳಲ್ಲಿ ಕಳೆದ ಎಂಟು ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ದೂರದ ತೋಟ ಹಾಗೂ ವೇದಾವತಿ ನದಿಗೆ ತೆರಳಿ ನೀರು ತರುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಚೌಳೂರು ಗ್ರಾಪಂ ಅಧಿಕಾರಿಗೆ ದೂರವಾಣಿ ಕರೆ ಮಾಡಿದ ಗ್ರಾಮಸ್ಥರು, ಸಮಸ್ಯೆ ಕುರಿತು ಮಾಹಿತಿ ನೀಡಿದರು. ಗ್ರಾಪಂಗೆ ತೆರಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸಬೇಕು. ಉತ್ತಮ ಗುಣಮಟ್ಟದ ಮತ್ತೊಂದು ಆರ್‌ಒ ಪ್ಲಾಂಟ್‌ನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುತ್ತುರಾಜ್ ಪಿಡಿಒ, ಗ್ರಾಪಂ ಚೌಳೂರು

ಜುಂಜರಗುಂಟೆ ಗ್ರಾಮದಲ್ಲಿ ಕಳೆದ ಎಂಟು ದಿನಗಳ ಹಿಂದೆ ಎರಡು ಕೊಳವೆಬಾವಿಗಳ ಮೋಟರ್‌ಗಳು ಸುಟ್ಟಿದ್ದು, ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರ ಆಗಲಿದೆ.

ಗ್ರಾಮದ ಆರ್‌ಒ ಪ್ಲಾಂಟ್‌ನ ನಿರ್ವಹಣೆ ಜವಾಬ್ದಾರಿಯನ್ನು ವಿಎಸ್‌ಎಸ್‌ಎನ್ ವಹಿಸಿಕೊಂಡಿದೆ. ಆರ್‌ಒ ಪ್ಲಾಂಟ್‌ನ ಯಂತ್ರಗಳು ಸುಸ್ಥಿತಿಯಲ್ಲಿವೆ. ಆದರೆ, ನೀರು ಲಭ್ಯವಾಗದ ಕಾರಣ ಬೀಗ ಹಾಕಲಾಗಿದೆ. ಗ್ರಾಪಂ ನೀರು ಒದಗಿಸಿದರೆ ಸಮಸ್ಯೆ ಪರಿಹಾರವಾಗುವುದು.
ಜಯಪ್ರಕಾಶ ವಿಎಸ್‌ಎಸ್‌ಎನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net