

ಪರಶುರಾಮಪುರ: ದೇಶದ ಪ್ರತಿಯೊಬ್ಬ ಪ್ರಜೆಯೂ ತೆರಿಗೆ ಪಾವತಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಪಿ.ನಾಗರಾಜು ತಿಳಿಸಿದರು.
ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ ಕುರಿತ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ದುಡಿಯುವ ವ್ಯಕ್ತಿ, ಉದ್ಯಮಿ, ಎಲ್ಲ ವರ್ಗದ ನೌಕರರು, ವ್ಯಾಪಾರಸ್ಥರು ತೆರಿಗೆಯನ್ನು ಸಕಾಲಕ್ಕೆ ಪಾವತಿಸಬೇಕು. ಇದರಿಂದ ದೇಶದ ಸಮಗ್ರ ಪ್ರಗತಿ ಸಾಧ್ಯ ಎಂದರು.
ಪ್ರಸಕ್ತ ದಿನಗಳಲ್ಲಿ ಜಿಎಸ್‌ಟಿ ಕುರಿತು ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದ್ದು, ಇದರಿಂದ ಆರ್ಥಿಕ ವ್ಯವಸ್ಥೆ ಸಬಲವಾಗಲು ಸಹಕಾರಿ ಆಗಿದೆ. ಕೇಂದ್ರ, ರಾಜ್ಯಗಳ ಪಾಲನ್ನು ಸರ್ಕಾರ ನೀಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಕೆ.ಟಿ.ಮಹಾಂತೇಶ ಮಾತನಾಡಿ, ಜಿಎಸ್‌ಟಿ ಪದ್ಧತಿಯಿಂದಾಗಿ ಮಾರುಕಟ್ಟೆಯ ವಹಿವಾಟು, ವ್ಯಾಪಾರದಲ್ಲಿ ಪಾರದರ್ಶಕತೆ ಕಾಣಬಹುದಾಗಿದೆ. ದೇಶದ ಒಳಿತಿಗಾಗಿ ಸಕಾಲಕ್ಕೆ ತೆರಿಗೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್ ಅಂಬುರಾಯ, ಪ್ರಾಧ್ಯಾಪಕರಾದ ಕೆ.ಆರ್.ರಂಗನಾಥ, ಸತೀಶ್, ವೀರಭದ್ರಪ್ಪ, ಮಹಮದ್ ಸಾದತ್, ವೈ.ಲಿಂಗೇಶ್ವರ, ಡಾ.ಸತೀಶ, ಶ್ರೀನಿವಾಸ, ಅಜಯ್ ಯಾದವ್ ಇದ್ದರು.