

ಪರಶುರಾಮಪುರ: ಗ್ರಾಮದ ಬಸ್ ನಿಲ್ದಾಣ ಸಮೀಪ ಗೊಲ್ಲರಹಟ್ಟಿಯ ಎದುರು ಆರ್‌ಒ ಪ್ಲಾಂಟ್‌ಗೆ ಯಂತ್ರ ಅಳವಡಿಸಿ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಶುಧ್ದ ಕುಡಿವ ನೀರು ಪೂರೈಸುವ ಕಾರ್ಯ ಇನ್ನೂ ಕಾರ್ಯಗತಗೊಂಡಿಲ್ಲ.
ಗ್ರಾಮದ ಪಾವಗಡ-ಚಳ್ಳಕೆರೆ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಶುದ್ಧ ಕುಡಿವ ನೀರಿಲ್ಲದೇ ಫ್ಲೋರೈಡ್ ನೀರನ್ನೇ ಸೇವಿಸುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ವರ್ಷದ ಹಿಂದೆ ಸಿದ್ಧಗೊಂಡಿರುವ ಆರ್‌ಒ ಪ್ಲಾಂಟ್ ಇದುವರೆಗೆ ಉದ್ಘಾಟನೆಗೊಂಡಿಲ್ಲ. ಇದರಿಂದ ಈ ಸ್ಥಳದಲ್ಲಿ ಟ್ರ್ಯಾಕ್ಟರ್ ಮತ್ತಿತರ ವಾಹನ ತಂದು ನಿಲ್ಲಿಸಿ ಪ್ಲಾಂಟ್‌ಗೆ ಅಪಾಯವಾಗುವ ಹಂತದಲ್ಲಿದೆ.
ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯ ಆಡಳಿತ ಕೂಡಲೇ ಘಟಕಕ್ಕೆ ಯಂತ್ರ ಅಳವಡಿಸಿ, ಜನರಿಗೆ ಶುದ್ಧ ಕುಡಿವ ನೀರು ಒದಗಿಸಿಕೊಡುವಂತೆ ನಿವಾಸಿಗಳಾದ ಸಿ.ರಂಗನಾಥ, ರಂಗಸ್ವಾಮಿ, ಗೋವಿಂದಪ್ಪ, ತಿಪ್ಪೇಸ್ವಾಮಿ, ಮೂರ್ತಿ ಆಗ್ರಹಿಸಿದ್ದಾರೆ.
ಗ್ರಾಮೀಣ ನೀರು ಸರಬರಾಜು ಇಲಾಖೆ, ಚಳ್ಳಕೆರೆ
ಕಾವ್ಯಾ ಎಇಇ
ಸರ್ಕಾರದ ಆಶಯದಂತೆ ಗ್ರಾಮೀಣರಿಗೆ ಶುದ್ಧ ಕುಡಿವ ನೀರು ಪೂರೈಸಲು ಗೊಲ್ಲರಹಟ್ಟಿಯ ನಿವಾಸಿಗಳಿಗೆ ಆರ್‌ಒ ಪ್ಲಾಂಟ್ ನಿರ್ಮಿಸಲಾಗಿದೆ. ಇನ್ನು 15 ದಿನದೊಳಗೆ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿವ ನೀರು ಒದಗಿಸಲಾಗುವುದು.
ಗ್ರಾಮಸ್ಥರಿಗೆ ಶುದ್ಧ ನೀರು ಕೊಡುವ ದೃಷ್ಟಿಯಿಂದ ಸ್ಥಳೀಯ ಶಾಸಕ, ಸಂಸದರ ಅನುದಾನ, ಪಂಚಾಯತ್‌ರಾಜ್ ಇಲಾಖೆಯಿಂದ ಅನುದಾನ ಬಳಸಿಕೊಂಡು ಆರ್‌ಒ ಪ್ಲಾಂಟ್ ನಿರ್ಮಿಸಲಾಗಿದೆ. ಕೂಡಲೇ ಗೊಲ್ಲರಹಟ್ಟಿ ಬಳಿ ಘಟಕಕ್ಕೆ ಯಂತ್ರ ಅಳವಡಿಸಿ, ನಿವಾಸಿಗಳಿಗೆ ಶುದ್ಧ ಕುಡಿವ ನೀರು ಒದಗಿಸಲಾಗುವುದು.
ಜಿ.ನಾಗರಾಜು, ಪಿಡಿಒ, ಗ್ರಾಪಂ