

ಪರಶುರಾಮಪುರ: ಕೋಟೆ ಓಬಳಾಪುರ ಹೊರವಲಯದ ಗೋಮಾಳದಲ್ಲಿ ಕೆಲವರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು, ಇದನ್ನು ತಡೆಯುವಂತೆ ಒತ್ತಾಯಿಸಿ ಪರಶುರಾಮಪುರದ ನಾಡಕಚೇರಿಗೆ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಆಶ್ರಯ ಮನೆ, ರುದ್ರಭೂಮಿಗೆ ಜಾಗ ಕಲ್ಪಿಸಲಾಗಿದ್ದು, 130.35 ಗುಂಟೆ ಜಾಗ ಉಳಿದಿದೆ. ಕೆಲವರು ಈ ಜಾಗದಿಂದ ಜಮೀನುಗಳಿಗೆ ಮಣ್ಣು ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿನ ಜನ-ಜಾನುವಾರುಗಳ ಸಂಖ್ಯೆ ಪರಿಗಣಿಸಿ ಅಗತ್ಯ ಭೂಮಿಯನ್ನು ಕಾಯ್ದಿರಿಸಬೇಕು. ಕೆಲವರು ಇಲಾಖೆಯ ಅನುಮತಿ ಪಡೆಯದೇ ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದಾರೆ. ಈ ಕುರಿತು ಸರ್ವೇ ಮಾಡಬೇಕು ಎಂದು ಆಗ್ರಹಿಸಿ, ಪ್ರಭಾರ ರಾಜಸ್ವ ನಿರೀಕ್ಷಕ ಹಿರಿಯಪ್ಪ, ಗ್ರಾಮಲೆಕ್ಕಾಧಿಕಾರಿ ಪರಮಶಿವಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕೋಟೆಓಬಳಾಪುರ ಗ್ರಾಮದ ತಿಪ್ಪೇಸ್ವಾಮಿ, ಎಚ್.ಪ್ರಶಾಂತ, ಜಯಮ್ಮ, ಶೈಲಜಾ, ನರಸಿಂಹಮೂರ್ತಿ, ಪಂಕಜಾ, ಮಂಜುಳಾ, ಟಿ.ದೇವರಾಜು, ಟಿ.ಶಿಲ್ಪಾ, ಮನೋಜಕುಮಾರ, ಮಂಜುನಾಥ, ಧನಂಜಯ, ನರಸಿಂಹಪ್ಪ ಮತ್ತಿತರರು ಇದ್ದರು.