

ಪರಶುರಾಮಪುರ: 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತ ರಾಷ್ಟ್ರವನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ.ರಂಗನಾಥ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕದಿಂದ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಉದ್ದೇಶ ಈಡೇರಿಸಲು ಶ್ರಮಿಸುವ ಆಡಳಿತ ವರ್ಗದ ಕಾರ್ಯಕ್ಕೆ ಜನರ ಸಹಕಾರ ಅಗತ್ಯ ಎಂದರು.
ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ಹಸಿವು ಆಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು ಕಾಣಿಸಿಕೊಳ್ಳುವುದು ರೋಗದ ಲಕ್ಷಣಗಳು. ಈ ಬಗ್ಗೆ ಎಚ್ಚರ ವಹಿಸಬೇಕು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಕಾಯಿಲೆ ಏಡ್ಸ್-ಮಧುಮೇಹ ಇರುವವರಿಗೆ ಬಹುಬೇಗ ಹರಡುತ್ತದೆ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ಮಾತನಾಡಿ, ಕ್ಷಯ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ಸೋಂಕಿದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹಾಗೂ ಗಾಳಿ ಮೂಲಕ ಬೇರೊಬ್ಬರಿಗೆ ಹರಡುತ್ತದೆ. ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ವರ್ಷದಲ್ಲಿ 10-15 ಜನರಿಗೆ ರೋಗ ಹರಡುತ್ತದೆ ಎಂದು ಹೇಳಿದರು.
ಕ್ಷಯ ರೋಗ ಚಿಕಿತ್ಸಕ ರಾಘವೇಂದ್ರ ಮಾತನಾಡಿ, ಕ್ಷಯದ ಬಗ್ಗೆ ಜನರಿಗೆ ತಿಳಿಸಲಿಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ಸರಸ್ವತಿ, ದಯಾನಂದ, ಲ್ಯಾಬ್‌ಟೆಕ್ನೀಷಿಯನ್ ವೀರೇಂದ್ರ, ಎಕ್ಸ್‌ರೇ ವಿಭಾಗದ ಸಚಿನ್, ಆರೋಗ್ಯ ಕಾರ್ಯಕರ್ತರಾದ ಲೇಪಾಕ್ಷಿ, ಮಂಜುಳಾ, ಅನಿತಾ, ಮಂಜುನಾಥ ಮತ್ತಿತರರಿದ್ದರು.