29ಕ್ಕೆ ವಡ್ಡೇಪಾಳ್ಯ ಜಾತ್ರೆಗೆ ಚಾಲನೆ

PRPURA JAATHRE STORY .23
Published on

ಪರಶುರಾಮಪುರ: ಸಮೀಪದ ವಡ್ಡೇಪಾಳ್ಯದಲ್ಲಿ ಆಂಧ್ರ-ಕರ್ನಾಟಕ ಗಡಿ ಗ್ರಾಮಗಳ ಆರಾಧ್ಯ ದೈವ ಗುಡಿಬಂಡೆ ಶ್ರೀ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವು ಫೆ.29ರಿಂದ ಮಾ.3ರ ವರೆಗೆ ಜರುಗಲಿದೆ.

ಗ್ರಾಮದ ವೇದಾವತಿ ನದಿಯಲ್ಲಿ ಫೆ.29ರಂದು ಸದ್ಭಕ್ತರ ಸಮ್ಮುಖದಲ್ಲಿ ಭೋವಿ ಸಮುದಾಯದಿಂದ ನೆರವೇರುವ ಗಂಗಾಪೂಜೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಈ ಕಾರ್ಯಕ್ಕಾಗಿ ಗುಡಿಬಂಡೆ ವೀರಾಂಜನೇಯಸ್ವಾಮಿ, ಈರಣ್ಣಸ್ವಾಮಿ ಮೂರ್ತಿಗಳನ್ನು ಆಂಧ್ರದ ಮಲಯನೂರಿನ ವಡ್ಡೇಪಾಳ್ಯಂನಿಂದ ಕಾಲುನಡಿಗೆಯಲ್ಲಿ ಹೊತ್ತು ಪರಶುರಾಮಪುರಕ್ಕೆ ತರಲಾಗುತ್ತದೆ. ನಂತರ ಗಂಗಾಪೂಜೆ, ಭಕ್ತರಿಂದ ಹರಕೆ ಸಮರ್ಪಣೆ, ಜನಪದ ವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯುತ್ತದೆ.

123 ಉರುಮೆ, 50 ಕಹಳೆಗಳೊಂದಿಗೆ ಮೈಸೂರಿನ ವೀರಗಾಸೆ, ತಮಿಳುನಾಡಿನ ಡ್ಯಾನ್ಸ್ ತಂಡ, ಪಗಡಲಬಂಡೆಯ ಈರಣ್ಣ ಸಹಕಲಾವಿದರಿಂದ ನಂದಿಕೋಲು ಕುಣಿತ, ಆಂಧ್ರ ಕಲಾವಿದರಿಂದ ಚಕ್ಕೇಭಜನೆ, ಕೀಲುಕುದುರೆ, ವಡ್ಡೇಪಾಳ್ಯದ ಡ್ರಂಸೆಟ್ ಮೇಳೆ ಶ್ರೀ ಸ್ವಾಮಿಯ ಉತ್ಸವಕ್ಕೆ ಮೆರಗು ನೀಡಲಿವೆ.

ಫೆ.29ರ ರಾತ್ರಿ ಪಿ.ಆರ್.ಪುರದಿಂದ ಉತ್ಸವ ಮೂರ್ತಿಗಳನ್ನು ಸಮೀಪದ ವಡ್ಡೇಪಾಳ್ಯಕ್ಕೆ ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ಹೈದರಾಬಾದ್ ಸಿನಿಮಾ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತದೆ.

ಮಾ.1ರ ಬೆಳಗ್ಗೆ ವಡ್ಡೇಪಾಳ್ಯದ ಜನಪದ ಕಲಾವಿದರಿಂದ ಕೋಲಾಟ, ಮಣೇವು ಪೂಜೆ. ರಾತ್ರಿ 9ರಿಂದ ಆಂಧ್ರದ ಬನಗಾನಪಲ್ಲಿ ವೀರಬ್ರಹ್ಮೇಂದ್ರಸ್ವಾಮಿ ಜನಪದ ಕಲಾವಿದರಿಂದ ಶ್ರೀ ವೀರಬ್ರಹ್ಮೇಂದ್ರಸ್ವಾಮಿಯ ಪೌರಾಣಿಕ ನಾಟಕ ಪ್ರದರ್ಶನವಿರುತ್ತದೆ.

ಮಾ.2ರಂದು ಕರ್ನಾಟಕ-ಆಂಧ್ರದ ಭಕ್ತರಿಗೆ ತೀರ್ಥಪ್ರಸಾದ ವಿ ನಿಯೋಗ, ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಎತ್ತಿನೋಟ ಸ್ಪರ್ಧೆ ಮತ್ತು ವಿಜೇತ ಎತ್ತುಗಳ ಮಾಲೀಕರಿಗೆ ಪ್ರಥಮ 30 ಸಾವಿರ, ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ರೂ. ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ. ನೆರೆದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ.

ಕೊನೆ ದಿನ ಮಾ.3ರಂದು ವಡ್ಡೇಪಾಳ್ಯದಲ್ಲಿ ನಂದಿಕೋಲು ಕುಣಿತದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net