

ಪರಶುರಾಮಪುರ: ಹಳ್ಳಿ ಜನರು ಆರೋಗ್ಯ ತಪಾಸಣಾ ಉಚಿತ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಚಳ್ಳಕೆರೆ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ, ಆಯುರ್ವೇದ ಆಸ್ಪತ್ರೆ ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಮೀಪದ ದೇವರಮರಿಕುಂಟೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಆಯುರ್ವೇದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಪೂರ್ವಜರು ಸಸ್ಯಗಳ ಬೇರು, ಎಲೆ, ಗೆಡ್ಡೆ ಗೆಣಸುಗಳಲ್ಲಿ ಔಷಧ ತಯಾರಿಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಈಗ ನಾವು ಅಲೋಪತಿಗೆ ಹೊಂದಿಕೊಂಡು ಆಯುರ್ವೇದವನ್ನು ಕಡೆಗಣಿಸುತ್ತಿದ್ದೇವೆ. ಇದು ಸಲ್ಲದು ಎಂದರು.
ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜನರ ಸಹಕಾರ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅತ್ಯಗತ್ಯ ಎಂದು ತಿಳಿಸಿದರು.
ತಾಪಂ ಸದಸ್ಯೆ ರಂಜಿತಾ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರೋಗ್ಯ ಅತೀ ಮುಖ್ಯ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಮಾರಕ ರೋಗಗಳಿಂದ ದೂರವಿರಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ತಾಪಂ ಸದಸ್ಯೆ ರಂಜಿತಾ, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕರಿಯಪ್ಪ, ಖಜಾಂಚಿ ಮೂಡಲಗಿರಿಯಪ್ಪ, ಬೊಂಬೇರಹಳ್ಳಿ ಬಸವರಾಜು, ನರಸಿಂಹಪ್ಪ, ಗೋವಿಂದಪ್ಪ, ಗುರುಮೂರ್ತಿ ಇತರರಿದ್ದರು.