

ಪರಶುರಾಮಪುರ: ಸಮೀಪದ ಜಾಜೂರಿನಲ್ಲಿ ಆರು ಮಂದಿಯನ್ನು ಹೋಂ ಕ್ವಾರೆಂಟೈನ್‌ಲ್ಲಿ ಇರಿಸಿದ್ದರಿಂದ ಆಂಧ್ರ-ಕರ್ನಾಟಕದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಸಮೀಪದ ಜಾಜೂರು, ದೊಡ್ಡೋಬಯ್ಯನಹಟ್ಟಿ, ಮೋದೂರು ಹಾಗೂ ಕಾಮಸಮುದ್ರ ಗ್ರಾಮಗಳಿಗೆ ಭಾನುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ, ಜಾಜೂರನ್ನು ಸೀಲ್‌ಡೌನ್ ಮಾಡಿದ್ದರಿಂದಾದ ತೊಂದರೆ, ಇನ್ನಿತರ ಸಮಸ್ಯೆ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದ ಶಾಸಕರು, ಸೀಲ್‌ಡೌನ್ ಮಾಡಿರುವುದು ನಿಮ್ಮ ಒಳಿತಿಗೆ. ಇದರಿಂದ ಆತಂಕ ಪಡುವುದು ಬೇಕಿಲ್ಲ ಎಂದು ತಿಳಿಸಿದರು.
ಬಳಿಕ ಆಂಧ್ರಕ್ಕೆ ಹೊಂದಿಕೊಂಡ ರಾಜ್ಯದ ದೊಡ್ಡೋಬಯ್ಯನಹಟ್ಟಿಗೂ ಭೇಟಿ ನೀಡಿ, ವೈದ್ಯಕೀಯ ವರದಿ ಬರುವವರೆಗೆ ಯಾರೂ ಮನೆಯಿಂದ ಹೊರ ಬರಬೇಡಿ. ಪಕ್ಕದಲ್ಲೇ ಆಂಧ್ರದ ಹಳ್ಳಿಗಳಿದ್ದು ಅಲ್ಲಿಗೆ ಯಾರೂ ಯಾವುದೇ ಕಾರಣಕ್ಕೂ ಹೋಗಬೇಡಿ. ನಿಮಗೆ ಅಗತ್ಯ ಸೇವೆಯನ್ನು ತಾಲೂಕು ಆಡಳಿತ ಒದಗಿಸುತ್ತದೆ ಎಂದು ಹೇಳಿದರು.
ಟಿಎಚ್‌ಒ ಡಾ. ಪ್ರೇಮಸುಧಾ ಮಾತನಾಡಿ, ಜಾಜೂರಿನ ಆರು ಮಂದಿ ಐಸೋಲೇಷನ್‌ನಲ್ಲಿ ಇರುವ ಕಾರಣ ಗ್ರಾಮ ಸೇರಿ ನಾಗಗೊಂಡನಹಳ್ಳಿ, ಕಾಮಸಮುದ್ರ, ದೊಡ್ಡೋಬಯ್ಯನಹಟ್ಟಿ ಸುತ್ತಲಿನ ಮೂರ್ನಾಲ್ಕು ಕಿಮೀ ವ್ಯಾಪ್ತಿಯ ಹಳ್ಳಿಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದರು.
ನೆರೆಯ ಆಂಧ್ರದವರೊಂದಿಗಿನ ಸಂಪರ್ಕ ಸದ್ಯಕ್ಕೆ ಕೈಬಿಡಿ. ಏನೇ ವ್ಯವಹಾರ ನಡೆಸಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಜ್ವರ, ಕೆಮ್ಮು, ನೆಗಡಿ ಇನ್ನಿತರ ಲಕ್ಷಣ ಕಂಡು ಬಂದರೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಮುಖಂಡ ಕೆ.ಜೆ.ಸಂತೋಷ, ಪಿಎಸ್‌ಐ ಮಹೇಶ, ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ, ಆರ್‌ಐ ಹಿರಿಯಪ್ಪ, ಡಾ.ಶ್ರೀನಿವಾಸ, ಗ್ರಾಪಂ ಸದಸ್ಯರಾದ ಕವಿತಾ, ತಿಪ್ಪೇಸ್ವಾಮಿ ಇತರರಿದ್ದರು.
ಜಾಜೂರು ಗ್ರಾಮಸ್ಥರ ಮನವಿ: ಗ್ರಾಮದ ಮುಖ್ಯವೃತ್ತ, ಆಸ್ಪತ್ರೆ, ಮತ್ತಿತರೆ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರಲ್ಲಿ ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ ಶುದ್ಧ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ ಎಂದು ಜನತೆ ಮನವಿ ಮಾಡಿದರು. ಪ್ರತಿ ದಿನ ಬೆಳಗ್ಗೆ ಸಮಯ ನಿಗದಿಗೊಳಿಸಿ ಹಣ್ಣು, ತರಕಾರಿ, ಹಾಲು, ದಿನಸಿ ಸಾಮಗ್ರಿ ಖರೀದಿಗೆ ಅನುವು ಮಾಡಿಕೊಡಿ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಕಲ್ಪಿಸಿ. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ ಎಂದು ಜಾಜೂರಿನ ಗ್ರಾಮಸ್ಥರು ಕೋರಿದರು.