

ಪರಶುರಾಮಪುರ: ಸಂಘ-ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಅಶಕ್ತ ಅಂಗವಿಕಲ-ಪೌರಕಾರ್ಮಿಕರಿಗೆ ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಇಲ್ಲಿನ ಚೌಳೂರು ಗೇಟ್‌ನಲ್ಲಿ ಭಾನುವಾರ ಶ್ರೀ ಸಾಯಿ ಎಜುಕೇಷನಲ್ ರೂರಲ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿಯಿಂದ ವಿವಿಧ ಹಳ್ಳಿಗಳ 50 ಮಂದಿ ಅಂಗವಿಕಲರು, ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಚಳ್ಳಕೆರೆ ತಾಲೂಕು ಸತತ ಬರಪೀಡಿತ ಪ್ರದೇಶವಾದ್ದರಿಂದ ಇಲ್ಲಿನ ಜನಜೀವನ ತುಂಬಾ ದುಸ್ತರವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಬಹಳಷ್ಟು ಜನರು ಊಟ, ಬಟ್ಟೆ, ಆಹಾರ ಧಾನ್ಯ ಸೇರಿ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಜನತೆಯ ಈ ಹೃದವಂತಿಕೆ ಕಾರ್ಯ ನಾಡಿನ ಸಂಸ್ಕೃತಿಯ ಬಿಂಬ ಎಂದು ಬಣ್ಣಿಸಿದರು.
ಶ್ರೀ ಸಾಯಿ ಎಜುಕೇಷನಲ್ ರೂರಲ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ, ಜಿಪಂ ಸದಸ್ಯ ಜಯವೀರಾಚಾರಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಸಂಸ್ಥೆಯ ಕಾರ್ಯದರ್ಶಿ ಗಜಲಕ್ಷ್ಮೀ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಪುರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ, ಮಂಡಲ ಮಾಜಿ ಅಧ್ಯಕ್ಷ ಲಿಂಗಣ್ಣ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಸಿಪಿಐ ಇ.ಆನಂದ, ಪಿಎಸ್‌ಐ ಮಹೇಶ ಹೊಸಪೇಟ ಇದ್ದರು.