

ಪರಶುರಾಮಪುರ: ಲಾಕ್‌ಡೌನ್ ಉಲ್ಲಂಘಿಸುವವರ ಮೇಲೆ ಡ್ರೋನ್ ಕ್ಯಾಮರಾ ಹದ್ದಿನ ಕಣ್ಣಿರಿಸಲಾಗಿದೆ ಎಂದು ಪರಶುರಾಮಪುರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ ಹೊಸಪೇಟೆ ತಿಳಿಸಿದರು.
ಗ್ರಾಮ ಸೇರಿ ಪಿ.ಮಹದೇವಪುರ, ಎನ್.ಪಿ.ಗೇಟ್, ಪಿಲ್ಲಹಳ್ಳಿ, ಎಸ್.ದುರ್ಗ, ಟಿ.ಎನ್.ಕೋಟೆ, ದೊಡ್ಡಚೆಲ್ಲೂರು, ಗೋಸಿಕೆರೆ ಇತರ ಹಳ್ಳಿಗಳಲ್ಲಿನ ಸಾರ್ವಜನಿಕ ಸ್ಥಳಗಳ ಸನ್ನಿವೇಶಗಳನ್ನು ಡ್ರೋಣ್ ಕ್ಯಾಮರಾದಿಂದ ಸಂಗ್ರಹಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಂಧ್ರಗಡಿ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ ಕದ್ದುಮುಚ್ಚಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಬುದ್ಧಿ ಕಲಿಸಲೆಂದು ಡ್ರೋಣ್ ಕ್ಯಾಮರಾಕ್ಕೆ ಚಾಲನೆ ನೀಡಲಾಗಿದೆ. ಇದರ ಮಾಹಿತಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಡ್ರೋಣ್ ಕ್ಯಾಮರಾ ಆಪರೇಟರ್ ಸುನಿಲ್, ಚೌಧರಿ, ದೇವರಾಜು, ಪೇದೆಗಳಾದ ಶ್ರೀನಿವಾಸ, ಕೃಷ್ಣ, ಮಂಜುನಾಥ ಇದ್ದರು.