

ಉಡುಪಿ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಪಂ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕ್ನ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ. ಅ.9ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಕಾಮಗಾರಿ ನಡೆಯಲಿದೆ. ಹೀಗಾಗಿ ಪಾರ್ಕ್ ಪ್ರವೇಶಕ್ಕೆ ಸಾರ್ವಜನಿಕರಿಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಕಾರ್ಕಳ ತಹಸೀಲ್ದಾರ್ ಅನಂತ್ ಶಂಕರ್ ಬಿ. ತಿಳಿಸಿದ್ದಾರೆ
2023ರ ಜನವರಿ 27ರಂದು ಪಾರ್ಕ್ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ವೀಕ್ಷಣೆಗೆ ತಾತ್ಕಾಲಿಕ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಪಾರ್ಕ್ ಕಾಮಗಾರಿಯಲ್ಲಿ ಪರಶುರಾಮನ ಮೂರ್ತಿಗೆ ಸಿಡಿಲು ನಿರೋಧಕ ಅಳವಡಿಕೆ, ತುಕ್ಕು ನಿರೋಧಕ ಲೇಪನ ಹಾಗೂ ಇನ್ನಿತರ ಕಾಮಗಾರಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 2023ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ ಹೇರಲಾಗಿತ್ತು. ಆದರೆ, ಕಾಮಗಾರಿ ನಡೆಸುತ್ತಿರುವ ನಿರ್ಮಿತಿ ಕೇಂದ್ರದವರು ಅ.7ರಂದು ತಾಲೂಕಾಡಳಿತಕ್ಕೆ ಈ ಕಾಮಗಾರಿ ಮುಗಿಸಲು ಇನ್ನಷ್ಟು ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಅ.9ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.