

ಉಡುಪಿ: ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ನಿಮಾರ್ಣವಾಗಿದ್ದ ಪರಶುರಾಮ ಮೂರ್ತಿ ಹಾಗು ಥೀಮ್ ಪಾರ್ಕ್ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳಿಕೆಗಳ ಮೂಲಕ ವಿವಾದ ಎಬ್ಬಿಸಿ, ಪ್ರವಾಸೋದ್ಯಮದ ಕಗ್ಗೊಲೆಯನ್ನು ನಡೆಸಿದೆ ಎಂದು ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಮೂರ್ತಿಯ ವಿನ್ಯಾಸವನ್ನು ಬದಲಿಸಲು ಗುತ್ತಿಗೆದಾರ ಶಿಲ್ಪಿ ಜಿಲ್ಲಾಡಳಿತದ ಅನುಮತಿ ಪಡೆದು, ಕಾರ್ಯಾರಂಭ ಮಾಡಲು ಹೊರಟಾಗ ಪರಾಜಿತ ಅಭ್ಯರ್ಥಿ ಬೆಟ್ಟದ ದಾರಿಗೆ ಮಣ್ಣು ಹಾಕಿ ಸ್ಥಳಾಂತರ ಮಾಡದಂತೆ ತಡೆದಿದ್ದಾರೆ. ಹೈಕೋರ್ಟ್ನಲ್ಲಿ ಮೂರ್ತಿ ಕಂಚಿನದ್ದು ಎಂಬುದಾಗಿ ಸಾಬೀತಾಗಿದೆ. ಆದರೂ ಸುಳ್ಳುಗಳ ಮೇಲೆ ಸುಳ್ಳು ಪೋಣಿಸುತ್ತಿದ್ದಾರೆ. ಒಂದು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ. ಇದಕ್ಕೆ ಕಾಂಗ್ರೆಸ್ ಹೊಣೆ. ಯೋಜನೆಗೆ ಪೂರ್ಣಗೊಳ್ಳಲು ಬಾಕಿ ಇರುವ ಹಣವನ್ನು ಬಿಡುಗಡೆಗೊಳಿಸುವ ಬದಲು ತನಿಖೆ ನೆಪದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಖಾಸಗಿ ವ್ಯಕ್ತಿ ದೂರಿನ ಆಧಾರದಲ್ಲಿ ತನಿಖೆ
ಸರ್ಕಾರಿ ಕಾಮಗಾರಿಗಳಲ್ಲಿ ಲೋಪಗಳಾಗಿದ್ದರೆ ಸಂಬಂಧಪಟ್ಟ ಇಲಾಖೆ ದೂರು ನೀಡಬೇಕು. ಆದರೆ ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲಿ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಎಫ್.ಐ.ಆರ್ ಆಗಿದೆ. ದೂರುದಾರ ಪೊಲೀಸರೊಂದಿಗೆ ಮಹಜರು ಪ್ರಕ್ರಿಯೆಗೆ ತೆರಳಿದ್ದಾರೆ. ಬಂಧಿಸಲ್ಪಟ್ಟಿರುವ ಶಿಲ್ಪಿಗೆ ಕಾಂಗ್ರೆಸ್ ಕಚೇರಿಯಲ್ಲಿ ಪಟ್ಟಿಮಾಡಿರುವ ಪ್ರಶ್ನೆಗಳನ್ನು ಪೋಲಿಸರು ಕೇಳುತ್ತಿದ್ದಾರೆ. ಅಜೆಕಾರು ಕೊಲೆ ಪ್ರಕರಣ ಆರೋಪಿಗಳನ್ನು 3 ದಿನ ಕಸ್ಟಡಿಗೆ ಪಡೆಯುವ ಪೋಲಿಸರು, ಅಮಾಯಕ ಶಿಲ್ಪಿಯನ್ನು 5 ದಿನ ಯಾಕೆ ಕಸ್ಟಡಿಗೆ ಪಡೆದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಜನಜಾಗೃತಿ ವೇದಿಕೆ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ನೀರೆ ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, ಎರ್ಲಪಾಡಿ ಗ್ರಾಪಂ ಅಧ್ಯಕ್ಷ ಸುನೀಲ್ ಹೆಗ್ಡೆ, ಬೈಲೂರು ಗ್ರಾಪಂ ಅಧ್ಯೆ ಸುಜಾತಾ ಪೂಜಾರಿ, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ಸಂತೋಷ್ ಬೈಲೂರು, ಗುರುರಾಜ್ ಮಾಡ ಉಪಸ್ಥಿತರಿದ್ದರು.