

ಹುಬ್ಬಳ್ಳಿ: ಪಾರಂಪರಿಕ ವೈದ್ಯಕಿಯ ಎನ್ನುವುದು ಅತ್ಯಂತ ಹಳೆಯ ಪದ್ಧತಿಯಾಗಿದೆ. ದೇಶದ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದೆ. ಇದನ್ನು ಇನ್ನಷ್ಟು ಪ್ರಚುರಪಡಿಸಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿಯ ಎಪಿಎಂಸಿ ಎದುರಿನ ಈಶ್ವರನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಗಂಗಾ ಆರೋಗ್ಯ ಮಹಾಮನೆ ಮತ್ತು ಭಾರತೀಯ ಪಾರಂಪರಿಕ ವೈದ್ಯ ಪರಿಷತ್ ಸಂಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾರಂಪರಿಕ ವೈದ್ಯ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಲುಪುವಂತೆ ಮಾಡಬೇಕು. ಇದಕ್ಕೆ ಇರುವ ಅಡೆತಡೆ ನಿವಾರಿಸಬೇಕಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವೆ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗಂಗಾ ಆರೋಗ್ಯ ಮಹಾಮನೆ ಸಂಸ್ಥಾಪಕ ವೈದ್ಯಶ್ರೀ ಚನ್ನಬಸವಣ್ಣ ಅವರು, ದಶಕಗಳಿಂದ ಯೋಗ, ಪಾರಂಪರಿಕ ವೈದ್ಯ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಭಾರತವು ಪಾರಂಪರಿಕ ವೈದ್ಯ ಪದ್ಧತಿಯನ್ನು ಕೇವಲ ವ್ಯಾಸಂಗ ಮಾಡಿ ಗುರುತಿಸಿಕೊಂಡಿಲ್ಲ. ಬದಲಾಗಿ ಇದನ್ನೇ ಆಧ್ಯಾತ್ಮಿಕ ತಳಹದಿಯಾಗಿ ಮಾಡಿಕೊಂಡಿರುವ ನಾಡು. ದೇಶದಲ್ಲಿ ಈ ಹಿಂದೆ ಅನೇಕ ಯುದ್ಧಗಳು ಆಗುತ್ತಿದ್ದವು. ಆಗೆಲ್ಲ ಸೈನಿಕರಿಗೆ, ಜನರಿಗೆ ಏನೇ ಆದರೂ ಪಾರಂಪರಿಕ ವೈದ್ಯರೇ ಔಷಧೋಪಚಾರ ಮಾಡುತ್ತಿದ್ದರು. ಯುದ್ಧದಂತಹ ಸನ್ನಿವೇಶದಲ್ಲೂ ಕ್ಷಣಾರ್ಧದಲ್ಲಿ ವ್ಯಕ್ತಿಯನ್ನು ಆರಾಮ ಮಾಡುವ ಶಕ್ತಿ ಅವರಲ್ಲಿತ್ತು ಎಂದರು.
ಇಂದು ಪಾರಂಪರಿಕ ವೈದ್ಯರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾದ ದಯನೀಯ ಸ್ಥಿತಿ ಬಂದಿದೆ. ನಮ್ಮ ತಳಹದಿ ಉಳಿಸಿಕೊಳ್ಳಲು ಹೋರಾಡಬೇಕಿದೆ. ಚೀನಾದಂತಹ ಜಗತ್ತಿನ ಅನೇಕ ಮುಂದುವರಿದ ದೇಶಗಳಲ್ಲಿ ಅಲ್ಲಿನ ಪಾರಂಪರಿಕ ವೈದ್ಯ ಪದ್ಧತಿ ಬಳಸಲಾಗುತ್ತದೆ. ರಾಸಾಯನಿಕ ಮುಕ್ತ ಔಷಧ ಬಳಸುತ್ತಾರೆ. ನಮ್ಮ ದೇಶದಲ್ಲಿಯೂ ಇದಕ್ಕೆ ಮಹತ್ವ ಸಿಗಬೇಕು. ಕಾನೂನಾತ್ಮಕ ಹೋರಾಟ ಮಾಡಿ ನಮ್ಮ ಹಕ್ಕು ಪಡೆಯೋಣ. ಪಾರಂಪರಿಕ ವೈದ್ಯರ ಸಮಸ್ಯೆಗಳ ಬಗ್ಗೆ ವಿಧಾನಸಭೆ, ಲೋಕಸಭೆಯಲ್ಲಿ ಚರ್ಚೆಗಳಾಗಬೇಕು ಎಂದು ಅವರು ಆಗ್ರಹಿಸಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಶರೀರ ಸದೃಢತೆಯೇ ಮೊದಲ ಧರ್ಮ ಸಾಧನೆಯಾಗಿದೆ. ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ರೇಖೆ ಚೆನ್ನಾಗಿರಬೇಕು. ಅದುವೇ ನಿಜವಾದ ಸಾಧನೆ. ಇಂತಹ ಆರೋಗ್ಯ ಕಲ್ಪಿಸುವ ಹಾಗೂ ವೈದ್ಯ ವೃತ್ತಿಯನ್ನು ಸಮಾಜ ಸೇವೆಯಾಗಿ ಪರಿಗಣಿಸಿರುವವರನ್ನು ದುಡ್ಡಿನಿಂದ ಅಳೆಯಬಾರದು ಎಂದು ಹೇಳಿದರು.
ಪಾರಂಪರಿಕ ವೈದ್ಯರಿಗೆ ಇರುವ ಜ್ಞಾನ ಅಪಾರವಾದುದು. ಕ್ಯಾನ್ಸರ್ ಕೂಡ ಗುಣಪಡಿಸುವ ಶಕ್ತಿ ಅವರಲ್ಲಿದೆ. ಭಾರತೀಯ ಯೋಗ, ಔಷಧ ಪದ್ಧತಿ ವಿಶಿಷ್ಟವಾದದ್ದು. ಇದನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಸವ ಕಲ್ಯಾಣದ ನೀಲಾಂಬಿಕ ಬಸವ ಯೋಗ ಕೇಂದ್ರದ ಶ್ರೀ ಸಿದ್ದರಾಮೇಶ್ವರ ಶರಣರು, ರೋಣದ ಜಮಾತೆ ಇಸ್ಲಾಮಿ ಹಿಂದ್ನ ಮೌಲಾನ ರಿಯಾಜ್ ಅಹ್ಮದ್, ಧಾರವಾಡ ಸೇಂಟ್ ಜೋಸೆಫ್ ಹೈಸ್ಕೂಲ್ ಪ್ರಾಂಶುಪಾಲ ಫಾದರ್ ಮೈಕಲ್ ಡಿಸೋಜಾ, ಭಾರತ ಸೇವಾ ಟ್ರಸ್ಟ್ ನ ಶ್ರೀಕಾಂತ ದುಂಡಿಗೌಡ್ರ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಪಂಚಾಕ್ಷರಿ ಪಂಚಯ್ಯನವರಮಠ, ಡಾ. ಚಂದ್ರಮೌಳಿ ನಾಯ್ಕರ, ಭಾರತೀಯ ಪಾರಂಪರಿಕ ವೈದ್ಯ ಪರಿಷತ್ ಸಂಸ್ಥಾಪಕಿ ವೈದ್ಯಶ್ರೀ ಜ್ಯೋತಿ ಚನ್ನಬಸವಣ್ಣ ಇತರರು ಪಾಲ್ಗೊಂಡಿದ್ದರು.