

ಶಿರಸಿ: ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ನೀಡುವ ಸಾರ್ಥಕ ಸಾಧಕ-2023 ಪ್ರಶಸ್ತಿಗೆ ಉತ್ತರ ಕನ್ನಡ ಮೂಲದ ಪ್ರಸಿದ್ಧ ಭಾಗವತ ಪರಮೇಶ್ವರ ಹೆಗಡೆ ಐನಬೈಲು ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಆ. 6ರಂದು ಹಮ್ಮಿಕೊಂಡಿರುವ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪ್ರಸಂಗಕರ್ತ ಶ್ರೀಧರ ಡಿ.ಎಸ್, ಸಾಹಿತಿ ಜಗದೀಶ ಶರ್ಮ ಸಂಪಾ, ಕಿರಣ್ ಉಪಾಧ್ಯಾಯ ಬಹ್ರೇನ್ ಪಾಲ್ಗೊಳ್ಳಲಿದ್ದಾರೆ.
ಪರಮೇಶ್ವರ ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲೂಕಿನ ಐನಬೈಲು ಗ್ರಾಮದವರು. ಗುರು ಬಾಳೆಹದ್ದ ಕೃಷ್ಣ ಭಾಗವತರಲ್ಲಿ ಯಕ್ಷಗಾನ ಹಾಗೂ ಶಿರಳಗಿ ಮಂಜುನಾಥ ಭಟ್ಟರಲ್ಲಿ ನಾಟ್ಯ ಕಲಿತರು. ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟ ಆರಂಭಿಸಿದರು. ಸೋಂದ ಮೇಳದಲ್ಲಿ ವೇಷಧಾರಿಗಳಾಗಿ ಕಾಣಿಸಿಕೊಂಡ ಅವರು, ಜನರಿಂದ ಅಪಾರ ಮೆಚ್ಚುಗೆ ಪಡೆದರು. ಮುಂದೆ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ಗರಡಿಯಲ್ಲಿ ಯಕ್ಷಗಾನದ ಅನೇಕ ಸೂತ್ರ, ರಂಗತಂತ್ರ, ಪ್ರಸಂಗ, ನಿರ್ದೇಶನವನ್ನು ಕಲಿತರು. ರಂಗದ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ ಯಕ್ಷ ಕವಿಗಳಾಗಿ ಹದಿನಾರಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿರುವುದು ವಿಶೇಷವಾಗಿದೆ.
ಯಕ್ಷಗಾನ ವಿಸ್ತಾರಗೊಳ್ಳುವುದು ತೀರಾ ಅಗತ್ಯವೆಂದು ನಂಬಿರುವ ಐನಬೈಲು ಅವರು, ಆಸಕ್ತರಿಗೆ ತರಬೇತಿ ನೀಡುತ್ತ ಬಂದಿದ್ದಾರೆ. ಶಾರದಾದೇವಿ ಅಂಧ ವಿಕಾಸ ಕೇಂದ್ರದ ಮಕ್ಕಳಿಗೆ ಯಕ್ಷಗಾನ ಕಲಿಸಿ ಅವರಿಂದ ಪ್ರದರ್ಶನ ಏರ್ಪಡಿಸಿದ್ದು, ಮಹತ್ತರ ಸಾಧನೆಯಾಗಿದೆ. ಶಿವಮೊಗ್ಗದ ತರಂಗ ಶಾಲೆಯ ಕಿವುಡ, ಮೂಕ ಮಕ್ಕಳಿಗೂ ಯಕ್ಷಗಾನ ತರಬೇತಿ ನೀಡಿದ್ದಾರೆ. ಕೊಂಕಣಿ, ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನವನ್ನು ಮಾಡಿಸಿದ್ದಾರೆ.