ಚುನಾವಣಾ ಮ್ಯಾಚ್​ ಫಿಕ್ಸಿಂಗ್​ಗೆ ಪರಂ ಜಗದ್ಗುರುವಂತೆ!

1
ತುಮಕೂರಿನಲ್ಲಿ ಬಿಜೆಪಿ ಶಾಸಕ ಬಿ.ಸುರೇಶಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಉಪಾಧ್ಯಕ್ಷ ವೈ.ಎಚ್​.ಹುಚ್ಚಯ ಇದ್ದರು.
Published on

ಚೇಲಾಗಳಿಂದ ಟೀಕೆ ಹೇಡಿಗಳ ಲಕ್ಷಣ - ಗ್ರಾಮಾಂತರ ಶಾಸಕ ಸುರೇಶ್​ಗೌಡ ಹೊಸ ಬಾಂಬ್​

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ಚುನಾವಣಾ ಮ್ಯಾಚ್​ಫಿಕ್ಸಿಂಗ್​ ಜಗದ್ಗುರು ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಹೊಸ ಬಾಂಬ್​ ಸಿಡಿಸಿದರು.

ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಮಾಜಿ ಶಾಸಕ ಗೌರಿಶಂಕರ್​ ನಿಸ್ಸೀಮರು. ಅವರು ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಕಂಡು ಬಂದಿದ್ದಾರೆ. ಪರಮೇಶ್ವರ ಕೊರಟಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವ ಚನ್ನಿಗಪ್ಪ ಸಹಕಾರ ಪಡೆಯಲು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಹೊಂದಾಣಿಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್​ ಅಭ್ಯರ್ಥಿ ಆಗಿದ್ದ ಗೌರಿಶಂಕರ್​ ಜತೆ ಕೈಜೋಡಿಸಿದ್ದರು ಎಂಬುದು ಜಗಜ್ಜಾಹಿರಾದ ವಿಷಯ. ಮ್ಯಾಚ್​ಫಿಕ್ಸಿಂಗ್​ನಲ್ಲಿ ಪರಮೇಶ್ವರ ಅವರು ಗೌರಿಶಂಕರ್​ ಅವರ ಜಗದ್ಗುರು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಪರಮೇಶ್ವರ, ರಾಜಣ್ಣ, ಗೌರಿಶಂಕರ್​ ಜತೆಗೆ ನನಗೆ ವೈಯಕ್ತಿಕವಾಗಿ ವೈಷಮ್ಯವಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ನಾವು ಆಡಳಿತ ಪಕ್ಷದಲ್ಲಿದ್ದವರನ್ನು ಟೀಕೆ ಮಾಡಲೇಬೇಕಾಗುತ್ತದೆ. ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವರು. ಆ ಕಾರಣಕ್ಕೆ ನಾನು ಟೀಕಿಸಿದ್ದೇನೆ. ನನ್ನೆಲ್ಲ ಟೀಕೆಗೆ ಅವರು ಉತ್ತರ ಕೊಡಬೇಕು. ಇಲ್ಲವಾದರೆ ತಪು$್ಪ ಸರಿ ಮಾಡಬೇಕು. ಅವರಿಗೆ ಧೈರ್ಯವಿದ್ದರೆ ನೇರವಾಗಿ ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸಬೇಕು. ಅದನ್ನು ಬಿಟ್ಟು ಅವರ ಚೇಲಾಗಳನ್ನು ಅದಕ್ಕೆ ಬಳಸಿಕೊಳ್ಳಬಾರದು. ಇದು ವೀರರ ಲಕ್ಷಣ ಅಲ್ಲ. ಹೇಡಿಗಳ ಲಕ್ಷಣ ಎಂದೂ ಹೇಳುವುದಿಲ್ಲ. ಅದನ್ನು ಜನರ ತೀರ್ಮಾನಕ್ಕೆ ಬಿಡುವೆ ಎಂದು ವ್ಯಂಗ್ಯವಾಡಿದರು. ಸಚಿವ ಕೆ.ಎನ್​.ರಾಜಣ್ಣನನ್ನು ಕೆಣಕಲಿ ಎಂದು ಕಾಂಗ್ರೆಸ್​ ಮುಖಂಡರು ಸವಾಲು ಹಾಕಿದ್ದು, ಇದು ಜಿಲ್ಲಾ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ನಾನು ಯಾರ ವಿರುದ್ಧ? ಯಾವಾಗ ಮಾತನಾಡಬೇಕು? ಎಂದು ಕಾಂಗ್ರೆಸ್ಸಿಗರು ನನಗೆ ಹೇಳಿ ಕೊಡಬೇಕಿಲ್ಲ. ಅವರು ಯಾರ ಮಾತು ಕೇಳಿ ನನ್ನ ವಿರುದ್ಧ ಸುದ್ದಿಗೋಷ್ಠಿ ಮಾಡಿದ್ದರು ಎಂಬುದನ್ನು ತಿಳಿಯದಷ್ಟೂ ದಡ್ಡನೂ, ಅಮಾಯಕನೂ ನಾನಲ್ಲ. ಸದನದಲ್ಲಿ ಯಾವ್ಯಾವ ವಿಷಯವನ್ನು ನಾನು ಪ್ರಸ್ತಾಪಿಸಿರುವೆ ಎಂಬುದನ್ನು ತಿಳಿದು ನನ್ನ ವಿರುದ್ಧ ಮಾತನಾಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್​, ಟಿ.ಆರ್​.ಸದಾಶಿವಯ್ಯ ಮತ್ತಿತರರು

ಲಿಂಕ್​ ಕೆನಾಲ್​ ಬೆಂಬಲಿಸಿ ಜನರಿಗೆ ವಿಷ ಹಾಕಿರುವ ಪರಮೇಶ್ವರ

ಸಿಎಂ ಮಾಡುತ್ತೇನೆಂದು ಹೇಳಿ ಸಿದ್ದರಾಮಯ್ಯ ಅವರು ಪರಮೇಶ್ವರ ಅವರ ಮೂಗಿಗೆ ತುಪ್ಪ ಸವರಿದ್ದಾರೆ. ಹಾಗಾಗಿ ಅವರು ಜಿಲ್ಲೆಯ ಹಿತಾಸಕ್ತಿ ಮರೆತಿದ್ದಾರೆ. ಜಿಲ್ಲೆಯ ಜನರಿಗೆ ಮರಣಶಾಸನವಾಗಿರುವ ಹೇಮಾವತಿ ಲಿಂಕ್​ ಕೆನಾಲ್​ ಯೋಜನೆಯನ್ನು ಗಣರಾಜ್ಯೋತ್ಸವ ಭಾಷಣದಲ್ಲಿ ಸಚಿವ ಪರಮೇಶ್ವರ ಬೆಂಬಲಿಸುವ ಮೂಲಕ ಜಿಲ್ಲೆಯ ಜನರಿಗೆ ವಿಷಹಾಕಿದ್ದಾರೆ. ಸದನದಲ್ಲಿ ಮಾತನಾಡುವ ಧಮ್​ ಅವರಿಗಿಲ್ಲ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್​ ಕುಬೇರ ಎಂದು ಟೀಕಿಸುವ ರಾಜಣ್ಣ, ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಲಿಂಕ್​ ಕೆನಾಲ್​ ವಿರೋಧಿಸಲಿ ನೋಡೋಣ? ಮುಂದಿನ ಸಂಪುಟ ಸಭೆಯಲ್ಲಿ ಲಿಂಕ್​ ಕೆನಾಲ್​ ರದ್ದುಪಡಿಸುವಂತೆ ಒತ್ತಾಯಿಸದಿದ್ದರೆ ಎನ್​ಡಿಎ ಶಾಸಕರು ಉಗ್ರ ಹೋರಾಟ ನಡೆಸಲಿದ್ದೇವೆ. ಇದಕ್ಕೆ ಗುಬ್ಬಿ ಶಾಸಕ ಶ್ರೀನಿವಾಸ್​ ಬೆಂಬಲವೂ ನಮಗಿದೆ ಎಂದು ಸುರೇಶಗೌಡ ಹೇಳಿದರು. ಗೌರಿಶಂಕರ್​ ಅವರು ಗಾಜಿನ ಮನೆಯಲ್ಲಿ ಇದ್ದುಕೊಂಡು ಬೇರೆಯವರತ್ತ ಕಲ್ಲು ಎಸೆಯೋದಲ್ಲ. ಯಾರಾದರು ಕ್ರಷರ್​ನವರು ನನಗೆ ಲಂಚ ಕೊಟ್ಟಿದ್ದಾಗಿ ಹೇಳಿದರೆ ಕ್ರಷರ್​ ಮುಂದೆ ನೇಣು ಹಾಕಿಕೊಳ್ಳುವೆ. ಗೌರಿಶಂಕರ್​ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಸುರೇಶ್​ಗೌಡ ವಾಗ್ದಾಳಿ ನಡೆಸಿದರು.

ಪ್ರಯಾಗ್​ನಲ್ಲಿ ಡಿಕೆಶಿನೂ ಮುಳುಗಿದ್ದಾರೆ!

ಪ್ರಯಾಗ್​ರಾಜ್​ನಲ್ಲಿ ನಾನು ಪಾಪ ತೊಳೆದುಕೊಂಡಿದ್ದೇನೋ, ಇಲ್ಲವೋ. ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರೇ ಕುಟುಂಬ ಸಮೇತ ಮುಳುಗಿಬಂದಿದ್ದಾರೆ. ಇನ್ನೂ ಈ ಸರ್ಕಾರದಲ್ಲಿ ಡಿಕೆಶಿ, ರಾಜಣ್ಣ, ಯತೀಂದ್ರ ಗೃಹಸಚಿವರಾಗಿದ್ದು, ಪೊಲೀಸರಿಗೆ ಜನಸಾಮಾನ್ಯರೇ ರಕ್ಷಣೆ ಕೊಡಬೇಕಾದ ಸ್ಥಿತಿ ಇದೆ ಎಂದು ಲೇವಡಿ ಮಾಡಿದರು.

ನನ್ನ ವಿರುದ್ಧ ಗೌರಿಶಂಕರ್​ ವೈಯಕ್ತಿಕ ಆರೋಪ ಮಾಡಿದ್ದು, ಅವರಂತೆ ಅದೇ ಭಾಷೆಯಲ್ಲಿ ಮಾತನಾಡಬಹುದು. ಆದರೆ, ನನಗೂ, ಅವರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ರಾಜಕೀಯದಲ್ಲಿ ಇರುವ ನಾವು ಸಮಾಜಕ್ಕೆ ಮಾದರಿಯಾಗಬೇಕೇ ಹೊರತು ರೌಡಿಗಳಂತೆ ವರ್ತಿಸಬಾರದು, ಮಾತನಾಡಬಾರದು. -ಬಿ.ಸುರೇಶಗೌಡ ಬಿಜೆಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net