

ಮುಂಡಗೋಡ: ಏಳುಕೋಟಿ! ಏಳುಕೋಟಿ!! ಏಳೂಕೋಟಿಗ್ಯೋ!!! ಛಾಂಗಮಲೋ ಛಾಂಗಮಲೋ ಎಂಬ ಭಕ್ತರ ಜಯಘೊಷಗಳ ಮಧ್ಯೆ ತಾಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಬೃಹದಾಕಾರದ ಆಲದಮರದ ಕೆಳಗೆ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಇದು ತಾಲೂಕಿನಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶಿಷ್ಟ ಹಾಗೂ ಅಪಾರ ಭಕ್ತರು ಜಮಾಯಿಸುವ ದೊಡ್ಡ ಜಾತ್ರೆಯಾಗಿದೆ.
ಮಧ್ಯಾಹ್ನ ಮೈಲಾರಲಿಂಗನ ಭಕ್ತರನೇಕರು ದೇವಸ್ಥಾನದ ಆವರಣದಲ್ಲಿ ಚಾಟಿಯಿಂದ ಮೈಗೆ ಬಾರಿಸಿಕೊಳ್ಳುತ್ತ ನೆರೆದ ಭಕ್ತರ ಮೈಜುಮ್ಮೆನ್ನುವಂತೆ ಛಡಿ ಏಟುಗಳನ್ನು ಹೊಡೆದುಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಕಾರಣಿಕೋತ್ಸವ: ಚವಡಳ್ಳಿ ಗ್ರಾಮದ ಮಧ್ಯದಲ್ಲಿರುವ ಶಿವಪ್ಪಜ್ಜ ಕೊಣನಕೇರಿ ಎಂಬುವರ ಮನೆ ಎದುರಿಗೆ ಕಾರಣಿಕೋತ್ಸವ ನಡೆಯಿತು. ಗೋರವಪ್ಪ ವಿಶ್ವೇಶ್ವರ ಮಡ್ಲಿ ಬಿಲ್ಲನ್ನು ಏರಿ ‘ತುಂಬಿದ ಕೊಡ ತುಳಕಿತಲೇ ಪರಾಕ್’ ಎಂದು ಕಾರಣಿಕ ನುಡಿದರು. ಈ ಭಾರಿ ಉತ್ತಮ ಮಳೆ, ಬೆಳೆ ಬರಲಿದೆ. ಈ ವರ್ಷದ ಭವಿಷ್ಯ ಇರುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.
ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಆದಂತೆಯೇ ಇಲ್ಲಿಯೂ ಸಹ ಕಾರಣಿಕವಾಯಿತು. ನಂತರ ದೇವಾಲಯದ ಬಳಿಯ ಕಲ್ಲಿನ ಮೂರ್ತಿಗೆ ಕಬ್ಬಿನ ಸರಪಳಿ ಕಟ್ಟಿ ಹರಿಯಲಾಯಿತು. ಇದೇ ವೇಳೆ ಭಕ್ತರು ನಾಲಿಗೆಯೊಳಗೆ ಶಸ್ತ್ರ ಪವಾಡ, ಶಿವದಾರದ ಪವಾಡ. ಹರಿತವಾದ ಉದ್ದನೆಯ ತ್ರಿಶೂಲವನು ಗಂಟಲಿನ ಕೆಳಭಾಗದಲ್ಲಿ ಹಾಯ್ದು ಕೊಳ್ಳುವುದು ಹಾಗೂ ಬಾಯಿಯ ಹತ್ತಿರ ಚುಚ್ಚಿಕೊಂಡು ಈ ಕಡೆಯಿಂದ ಆಕಡೆ ಹಾಯ್ದುಕೊಂಡು ಭಕ್ತಿ ಮೆರೆದರು.
ನಂತರ ದೇವಸ್ಥಾನದ ಎದುರಿಗೆ ಇರುವ ಕಲ್ಲಿನ ಮೂರ್ತಿಯ ಎದುರು ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಹಿರಿಯ ಗೊರವಪ್ಪರ ಮಾರ್ಗದರ್ಶನದಲ್ಲಿ ಏಳು ಕೋಟಿ ಏಳು ಕೋಟಿ ಎಂದು ಜಯಘೊಷ ನೆನೆಯುತ್ತಾ ಸರಪಳಿ ಕಟ್ಟಿದ ಕಲ್ಲಿನ ಮೂರ್ತಿಯನ್ನು ಪ್ರದಕ್ಷಿಣೆ ಹಾಕಿದರು. ನಂತರ ಕ್ಷಣಮಾತ್ರದಲ್ಲಿ ಭಕ್ತರು ನೋಡುನೋಡುತ್ತಿದ್ದಂತೆ ಕಲ್ಲಿನ ಮೂರ್ತಿಗೆ ಕಟ್ಟಿದ್ದ ಆರು ಸರಪಳಿಗಳನ್ನು ಭಕ್ತರು ಹರಿದರು ಸರಪಳಿ ಹರಿಯುವ ದೃಶ್ಯವನ್ನು ನೋಡಲು ಭಕ್ತರು ಆಲದಮರದ ಮೇಲೆ, ದೇವಸ್ಥಾನದ ಆವರಣ ಸೇರಿ ಇತರೆಡೆ ನಿಂತು ವೀಕ್ಷಿಸಿದರು.
ಜಾತ್ರೆಯಲ್ಲಿ ಗೊರವಪ್ಪಗಳು ಕುರಿ ಉಣ್ಣೆಯಿಂದ ತಯಾರಿಸಿದ ನಿಲುವಂಗಿ ಹಾಕಿಕೊಂಡು ಕೈಯಲ್ಲಿ ಡಮರುಗ ಹಾಗೂ ಭಂಡಾರ ಡಬ್ಬ, ನಾರು ಬಾರಕೋಲಿನಿಂದ ಕಾಲಿಗೆ ಹೊಡೆದುಕೊಳ್ಳುತ್ತಾ ದೇವರನ್ನು ಜಪಿಸುವುದು ಸಾಮಾನ್ಯವಾಗಿತ್ತು. ಒಟ್ಟಿನಲ್ಲಿ ಮಿನಿ ಮೈಲಾರವೆಂದೇ ಪ್ರಸಿದ್ಧಿಯಾಗಿರುವ ಚವಡಳ್ಳಿಯ ಮೈಲಾರಲಿಂಗ ಜಾತ್ರೆ ಸಹಸ್ರಾರು ಭಕ್ತರನಡುವೆ ಅದ್ದೂರಿಯಾಗಿ ನಡೆಯಿತು.