ಮಾಯಕೊಂಡದಲ್ಲಿ ಬೃಹತ್ ತಿರಂಗಾ ಯಾತ್ರೆ

22myk1
Published on

ಮಾಯಕೊಂಡ: ಕಾಶ್ಮೀರದ ಪಹಲ್ಗಾಮ್ಲ್ಲಿ 26 ಭಾರತೀಯ ಪ್ರವಾಸಿಗರ ನರಮೇಧಕ್ಕೆ ಕಾರಣವಾದ, ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿದ್ದ ಉಗ್ರರನ್ನು ಮತ್ತು ಅವರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನಿಕರಿಗೆ ಬೆಂಬಲ ಹಾಗೂ ಆತ್ಮಸ್ಥೈರ್ಯ ತುಂಬಲು ಬಿಜೆಪಿಯಿಂದ ಗುರುವಾರ ಗ್ರಾಮದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.

ಮದಕರಿ ನಾಯಕರ ಸಮಾಧಿ ಸ್ಥಳದಿಂದ ಆರಂಭವಾದ ಯಾತ್ರೆ ಗ್ರಾಮದ ಮುಖ್ಯ ರಾಜಬೀದಿಗಳಲ್ಲಿ ಸಾಗಿತು. ಭಾರತದ ತಿರಂಗಾವನ್ನು ಹಿಡಿದು ಸೈನಿಕರಿಗೆ ಜಯಘೊಷ ಮೊಳಗಿಸುತ್ತಾ ನಾಡಕಚೇರಿ ಆವರಣಕ್ಕೆ ಬಂದು ಬೃಹತ್ ಸಭೆ ನಡೆಸಿದರು.

ಮೂರು ಗಂಟೆಗಳ ಕಾಲ ನಡೆದ ಯಾತ್ರೆಗೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಅನಿಲ್ ಕುಮಾರ್ ನಾಯ್್ಕ ಮಾತನಾಡಿ, ಧರ್ಮ ಕೇಳಿ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ನೆಲೆಗಳನ್ನು ಮತ್ತು ಅವರ ಅಡಗು ತಾಣಗಳನ್ನು ಕೇವಲ 20 ರಿಂದ 25 ನಿಮಿಷದೊಳಗೆ ಧ್ವಂಸ ಮಾಡಿ ಹೆಡೆಮುರಿ ಕಟ್ಟಿದ ಭಾರತೀಯ ಯೋಧರಿಗೆ ಗೌರವ, ಅಭಿನಂದನೆ ಮತ್ತು ಆತ್ಮಸ್ಥೈರ್ಯ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಭಾರತ ಶಾಂತಿ ಮತ್ತು ಸೌಹಾರ್ದಯುತ ದೇಶ. ಆದರೆ ಉಗ್ರರ ಉಪಟಳವನ್ನು ಎಂದೂ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನಮ್ಮ ಸೈನಿಕರು ಭಯೋತ್ಪಾದಕರನ್ನು ಸದೆಬಡಿಯುವ ಮೂಲಕ ತೋರಿಸಿಕೊಟ್ಟಿದ್ದಾರೆ. ಪ್ರಪಂಚದ ಎದುರಿನಲ್ಲಿ ಪಾಕಿಸ್ತಾನ ಅಪರಾಧಿ ಸ್ಥಾನದಲ್ಲಿ ನಿಂತಿದೆ. ದೇಶದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು, ಯಾವುದೇ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಚಿನ್ ಮಾತನಾಡಿ, ದೇಶ ಕಂಡ ಅಪ್ರತಿಮ ಪ್ರಧಾನಿ ನರೇಂದ್ರ ಮೋದಿಯವರು ಉಗ್ರರನ್ನು ಸದೆಬಡಿಯಲು ಭಾರತೀಯ ಯೋಧರಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಪಾಕಿಸ್ತಾನ ಮತ್ತೆ ತನ್ನ ಚಾಳಿ ತೋರಿಸಿದರೆ ಭೂಪಟದಲ್ಲಿ ಪಾಪಿಸ್ತಾನ ಇರುವುದಿಲ್ಲ ಎಂದು ಎಚ್ಚರಿಸಿದರು.

ಮಾಜಿ ಸೈನಿಕ ಮಾಯಕೊಂಡ ಕಲ್ಲೇಶ್ ಮಾತನಾಡಿ, ಭಾರತೀಯ ಸೈನ್ಯ ಎಂತಹ ಕ್ಲಿಷ್ಟಕರ ಸ್ಥಿತಿ ಬಂದರೂ ಹೆಜ್ಜೆ ಹಿಂದಿಡದೆ ಶತ್ರುಗಳ ಸ್ಥಳಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕೇಂದ್ರ ಸರ್ಕಾರ ಸೈನ್ಯಕ್ಕೆ ಸಾಕಷ್ಟು ಆಧುನಿಕ ಶಸ್ತ್ರಾಸ್ತ್ರ ಮತ್ತು ಆತ್ಮಸ್ಥೈರ್ಯವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಬಿ.ಎಸ್. ರಮೇಶ್, ಎಸ್​ಟಿ ಮೋರ್ಚಾ ಅಧ್ಯಕ್ಷ ತ್ಯಾವಣಿಗೆ ಕೃಷ್ಣಕುಮಾರ್, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕರಿಲಕ್ಕೇನಹಳ್ಳಿ ಓಂಕಾರಪ್ಪ ಮಾತನಾಡಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ವಿ.ಎಚ್. ಲತಾ, ಮಲ್ಲಿಕಾರ್ಜುನ್ ದೊಡ್ಡಘಟ್ಟ, ಕಲ್ಪನಳ್ಳಿ ರಾಕೇಶ್, ಪೂಜಾರ್ ಅಶೋಕ್, ಹುಚ್ಚವನಹಳ್ಳಿ ಮಹೇಶ್, ಪಿಎಸ್​ಐ ಅಜಯ್ಕುಮಾರ್, ಹೆಬ್ಬಾಳು ಉಮೇಶ್, ರಾಜಶೇಖರ್ ಸಂಡೂರ್, ಮಹಾಬಲೇಶ್, ಉಮೇಶ್, ನೇರ್ಲಿಗೆ ಕರಿಯಪ್ಪ, ಅಣ್ಣಾಪುರ ಶಿವಣ್ಣ, ಕ್ಯಾತನಹಳ್ಳಿ ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net