ಜನರ ಮನದಲ್ಲಿ ಚಿರಕಾಲ ಉಳಿಯುವಂತಿರಲಿ: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿಕೆ

Parade sub-committee meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಯು ಆಕರ್ಷಣೀಯವಾಗಿರಬೇಕು. ಇದರೊಂದಿಗೆ ಜನರ ಮನದಲ್ಲಿ ಚಿರಕಾಲ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಮೆರವಣಿಗೆಗೆ ಉತ್ತಮ ಕಲಾತಂಡಗಳ ಆಯ್ಕೆ ಮುಖ್ಯ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೆರವಣಿಗೆ ಉಪಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೆರವಣಿಗೆ ಉಪಸಮಿತಿಯಿಂದ 95 ಲಕ್ಷ ರೂ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತಾತ್ಕಾಲಿಕವಾಗಿ 70 ಲಕ್ಷ ರೂ ನೀಡಲಾಗಿದೆ. ಈ ಅನುದಾನದಲ್ಲಿ ಮೆರವಣಿಗೆಯನ್ನು ಉತ್ತಮವಾಗಿ ಆಯೋಜಿಸಬೇಕು ಎಂದು ಹೇಳಿದರು.

ಪ್ರತಿ ಜಿಲ್ಲೆಯಿಂದ 3 ಕಲಾತಂಡದ ವಿವರ ಸಮಿತಿಯಲ್ಲಿ ಲಭ್ಯವಿದ್ದು, ಒಂದೊಂದು ತಂಡವನ್ನು ಅವರ ಪ್ರದರ್ಶನದ ವಿಡಿಯೋ ತುಣುಕನ್ನು ನೋಡಿ ಆಯ್ಕೆ ಮಾಡಬೇಕು. ಈ ಸಮಯದಲ್ಲಿ ಬೇರೆ ಬೇರೆ ಕಲಾ ಪ್ರಕಾರ ಇರಬೇಕು. ಇದಲ್ಲದೆ 87 ಆಟೋಗಳ ಮೆರವಣಿಗೆ ಇರಲಿದೆ. ಇದರಲ್ಲಿ ಸಮ್ಮೇಳನದ ಅಧ್ಯಕ್ಷರ ಭಾವಚಿತ್ರದೊಂದಿಗೆ ಕನ್ನಡದ ಬಾವುಟದೊಂದಿಗೆ ಅಲಂಕೃತವಾಗಿ ಭಾಗವಹಿಸಲು ಸಿಂಗರಿಸಬೇಕು ಎಂದರು.

ಅಂತೆಯೇ 20 ಎತ್ತಿನಗಾಡಿಗಳನ್ನು ಬಳಸಿಕೊಳ್ಳುವುದರ ಮೂಲಕ ರೈತರ ಗೌರವವನ್ನು ಹೆಚ್ಚಿಸುವ ರೀತಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕಂಪನ್ನು ಪಸರಿಸುವಂತೆ ಯೋಜನೆ ರೂಪಿಸಿ. ಇದಕ್ಕಾಗಿ ಸಮಿತಿಯ ಎಲ್ಲ ಸದಸ್ಯರು ಕಾರ್ಯಪ್ರವೃತರಾಗಬೇಕು. ಜಿಲ್ಲೆಯ ಸಂಸ್ಕೃತಿ, ಸಾಹಿತಿ, ಕೃಷಿ ಸೇರಿದಂತೆ ಇನ್ನಿತರೆ ವೈವಿಧ್ಯಮಯ ವಿಷಯಗಳನ್ನು ಒಟ್ಟುಗೂಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ರೀತಿ 5 ಸ್ತಬ್ಧಚಿತ್ರವನ್ನು ಸಿದ್ಧಪಡಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ ಕಲಾವಿದರಿಗೆ ವಸತಿ ಸೇರಿದಂತೆ ವಿವಿಧ ಮೂಲ ಸೌಕರ್ಯದ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ಪಣ್ಣೇದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net