

ಸವಣೂರ: ಬಸವ ಜಯಂತಿ ಹಾಗೂ ಪಟ್ಟಣದ ಹೊರಕೇರಿ ಓಣಿಯ ಬಸವೇಶ್ವರ ದೇವರ ರಥೋತ್ಸವದ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರದೊಂದಿಗೆ ಸಾಂಪ್ರದಾಯಿಕ ಶೈಲಿಯ ವಿಶೇಷವಾಗಿ ಅಲಂಕರಿಸಿದ್ದ ಎತ್ತುಗಳ ಮೆರವಣಿಗೆ ನಡೆಯಿತು.
ಬಸವೇಶ್ವರರ ಭಾವಚಿತ್ರವುಳ್ಳ ಎತ್ತಿನ ಬಂಡಿ ಹಾಗೂ ಎತ್ತುಗಳ ಮೆರವಣಿಗೆಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ ಚಾಲನೆ ನೀಡಿದರು. ಹೊರಕೇರಿ ಬಸವೇಶ್ವರ ದೇವಸ್ಥಾನದಿಂದ ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊರಕೇರಿ ಬಸವೇಶ್ವರ ದೇವಸ್ಥಾನಕ್ಕೆ ಸಂಪನ್ನಗೊಂಡಿತು.
ಮೆರವಣಿಗೆಯುದ್ದಕ್ಕೂ ಜಗಜ್ಯೋತಿ ಬಸವೇಶ್ವರರ, ಹರ ಹರ ಮಹದೇವ ಜಯಘೋಷಗಳು ಮೊಳಗಿದವು. ಸಾಂಪ್ರದಾಯಿಕ ಶೈಲಿಯಲ್ಲಿ ವಿಶೇಷವಾಗಿ ಅಲಂಕರಿಸಿದ್ದ ಎತ್ತುಗಳೊಂದಿಗೆ ತರುಣರು ಸೆಲ್ಪಿ ತೆಗೆದುಕೊಳ್ಳುವ ದೃಶ್ಯಗಳು ಕಂಡುಬಂದವು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಸಂಗಯ್ಯನವರು ಗೌಡ್ರಗುರುಸ್ವಾಮಿಮಠ, ಮುತ್ತಯ್ಯ ಮಣಕವಾಡಮಠ, ಈರಣ್ಣ ರಾಯನಾಳ, ಸಂತೋಷ ಗಡಾದ, ನಿಂಗಪ್ಪ ಕುಲಕರ್ಣಿ, ರಾಮನಗೌಡ ರೆಲಿ, ಪ್ರಕಾಶ ಗಾಣಿಗೇರ, ನಿಂಗಪ್ಪ ಬೆಟದೂರ, ಗದಿಗೆಪ್ಪ ರಾಯಚೂರ, ಸುಭಾಸ ಕುಲಕರ್ಣಿ, ರವಿ ಕಳಕಪ್ಪನವರ, ಈರಣ್ಣ ಕೆಮ್ಮಣ್ಣಕೇರಿ ಇತರರಿದ್ದರು.